
ಆನೇಕಲ್: ತಾಲ್ಲೂಕಿನ ಅತ್ತಿಬೆಲೆಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಗಡಿನಾಡು ಕಲಾ ಉತ್ಸವ ಸಂಭ್ರಮದಿಂದ ಜರುಗಿತು. ವಿವಿಧ ಜಾನಪದ ಕಲಾತಂಡಗಳು ಗಡಿನಾಡ ಕಲಾ ಉತ್ಸವಕ್ಕೆ ಮೆರುಗು ನೀಡಿತು.
ಗಡಿನಾಡ ಕಲಾ ಉತ್ಸವದಲ್ಲಿ ವೀರಗಾಸೆ, ಪೂಜಾ ಕುಣಿತ, ನಗಾರಿ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಮಹಿಳೆಯರು ಮಂಗಲ ಕಳಶಗಳನ್ನು ಹೊತ್ತು ಅತ್ತಿಬೆಲೆಯ ಪ್ರಮುಖ ಬೀದಿಗಳಲ್ಲಿ ಸಾಗಿದರು. ಭುವನೇಶ್ವರಿ ದೇವಿಯ ಭಾವಚಿತ್ರವನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕುಳ್ಳಿಸಿ ಮೆರವಣಿಗೆ ನಡೆಸಲಾಯಿತು.
ಜಯ ಕರ್ನಾಟಕ ಸಂಘಟನೆಯ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಪ್ರಭಾಕರ್ ರೆಡ್ಡಿ ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ನಾಡು ನುಡಿ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಬೆಳಕು ಚೆಲುವ ಸಲುವಾಗಿ ಗಡಿನಾಡು ಕಲಾ ಉತ್ಸವ ಆಯೋಜಿಸಲಾಗಿದೆ. ಜಾಗತೀಕರಣ ಮತ್ತು ನಗರೀಕರಣ ಹೆಚ್ಚಾದಂತೆ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಆನೇಕಲ್ ತಾಲೂಕಿನಲ್ಲಿ ಐದು ಕೈಗಾರಿಕಾ ಪ್ರದೇಶಗಳಿದ್ದು, ಅನ್ಯಭಾಷಿಕರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯು ಕಾರ್ಯಕ್ರಮ ರೂಪಿಸುತ್ತದೆ. ಆನೇಕಲ್ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಜಯ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್.ಜಗದೀಶ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಯೋಗಾನಂದ, ರಾಜ್ಯ ಕಾರ್ಯಕ್ಷ ಮುನಿಸ್ವಾಮಣ್ಣ, ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಮುಖಂಡರಾದ ರಜತ್, ಹರೀಶ್, ಅಂಬರೀಶ್, ನಟರಾಜ್, ಸುಮಂತ್, ಭಾನುಮತಿ, ಕಿರಣ್, ಯಾಸ್ಮಿನ ತಾಜ್, ಸೀಮಾ, ಬಂಗಾರ್ ಬಾಬು, ನಿಶಾ, ವಕೀಲರ ಸಂಘದ ಅಧ್ಯಕ್ಷ ಪಟಪಟ್ ಪ್ರಕಾಶ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.