ADVERTISEMENT

ದೊಡ್ಡಬಳ್ಳಾಪುರ: ಸುಟ್ಟ ಸ್ಥಿತಿಯಲ್ಲಿ ಹೆಬ್ಬಾವಿನ ಕಳೆಬರಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 14:53 IST
Last Updated 15 ಡಿಸೆಂಬರ್ 2019, 14:53 IST
ಸುಟ್ಟು ಹಾಕಿರುವ ಹೆಬ್ಬಾವಿನ ಕಳೆಬರಹ
ಸುಟ್ಟು ಹಾಕಿರುವ ಹೆಬ್ಬಾವಿನ ಕಳೆಬರಹ   

ದೊಡ್ಡಬಳ್ಳಾಪುರ: ಮಾಕಳಿ ಬೆಟ್ಟದ ತಪ್ಪಲಿನಲ್ಲಿ ಕಾಣಿಸಿಕೊಂಡಿದ್ದ ಅಪರೂಪದ ಹೆಬ್ಬಾವನ್ನು ಸೆರೆಹಿಡಿದು ಕೊಂದು, ಸುಟ್ಟುಹಾಕಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಯುವ ಸಂಚಲನ ಅಧ್ಯಕ್ಷ ಚಿದಾನಂದ್‌, ಮಾಕಳಿ ಬೆಟ್ಟ ಸೇರಿದಂತೆ ಈ ಭಾಗದಲ್ಲಿ ಬರುವ ಘಾಟಿ ಕ್ಷೇತ್ರದಲ್ಲಿನ ಬೆಟ್ಟಗಳ ಸಾಲು ಸರಿಸೃಪಗಳ ವಾಸಕ್ಕೆ ಹೆಸರಾಗಿದೆ. ಅದರಲ್ಲೂ ಮಾಕಳಿ ಬೆಟ್ಟದ ತಪ್ಪಲಿನಲ್ಲಿ ಇರುವ ಗುಂಡಂಮಗೆರೆ ಕೆರೆಯಲ್ಲಿ ವರ್ಷವಿಡೀ ನೀರು ನಿಂತಿರುವುದರಿಂದ ಈ ಕೆರೆಯ ಸುತ್ತ ಹಲವಾರು ಪ್ರಾಣಿ, ಪಕ್ಷಿಗಳು ಜೀವಿಸುತ್ತಿವೆ. ಹೀಗಾಗಿ ಕಳ್ಳಬೇಟೆಗಾರರ ಹಾವಳಿ ಮಿತಿ ಮೀರಿದೆ. ಅರಣ್ಯ ಇಲಾಖೆಯವರು ಈ ಭಾಗದಲ್ಲಿ ರಾತ್ರಿ ವೇಳೆ ಗಸ್ತು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುಮಾರು 10 ಅಡಿಗಳಷ್ಟು ಉದ್ದ ಇರುವ ಹೆಬ್ಬಾವರನ್ನು ಮೀನಿನ ಬಲೆ ಬಳಸಿ ಸೆರೆಹಿಡಿಯಲಾಗಿದೆ. ಸಾಮಾನ್ಯವಾಗಿ ಇಷ್ಟೊಂದು ದೊಡ್ಡ ಗಾತ್ರದ ಹೆಬ್ಬಾವುಗಳು ದಟ್ಟವಾದ ಕಾಡುಗಳಲ್ಲಿ ಮಾತ್ರ ಕಂಡುಬರುವಂತಹವು. ಆದರೆ ಮಾಕಳಿ ಬೆಟ್ಟದ ತಪ್ಪಲಿನಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಗಾತ್ರದ ಹೆಬ್ಬಾವು ಕಂಡು ಬಂದಿದ್ದು ಕೊಂದುಹಾಕಿರುವುದು ದುರಂತದ ಸಂಗತಿ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಈ ಕೃತ್ಯದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.