ADVERTISEMENT

ಧರ್ಮಪುರ, ಹಳಿಯೂರು–ವಿಮಾನ ನಿಲ್ದಾಣ ನಡುವೆ ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 13:40 IST
Last Updated 4 ಅಕ್ಟೋಬರ್ 2023, 13:40 IST
ವಿಜಯಪುರ ಹೋಬಳಿ ಧರ್ಮಪುರ ಗ್ರಾಮದಲ್ಲಿ ಬಿ.ಎಂ.ಟಿ.ಸಿ.ಬಸ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು.
ವಿಜಯಪುರ ಹೋಬಳಿ ಧರ್ಮಪುರ ಗ್ರಾಮದಲ್ಲಿ ಬಿ.ಎಂ.ಟಿ.ಸಿ.ಬಸ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು.   

ವಿಜಯಪುರ(ದೇವನಹಳ್ಳಿ): ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಪುರ ಹಾಗೂ ಹಳಿಯೂರು ಮತ್ತು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ನಡುವೆ ಸಂಚರಿಸುವ ಬಿಎಂಟಿಸಿ ಬಸ್ ಸಂಚಾರ ಬುಧವಾರ ಆರಂಭಗೊಂಡಿತು.

ಬಸ್‌ ಸಂಚಾರಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ತಾಲ್ಲೂಕಿನ ಹಲವಾರು ಗ್ರಾಮಗಳಿಗೆ ಬಸ್‌ ಸೌಕರ್ಯ ವಿಲ್ಲದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ, ರೈತರು ಬೆಳೆಗಳನ್ನು ಮಾರುಕಟ್ಟೆಗೆ ಸಾಗಾಣಿಕೆಗೂ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಮನವಿ ಮಾಡಿದ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹಾಗೂ ಕೆ.ಆರ್.ಮಾರುಕಟ್ಟೆಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಗ್ರಾ.ಪಂ ಅಧ್ಯಕ್ಷೆಗೆ ಮಾಹಿತಿ ಕೊಟ್ಟಿಲ್ಲ: ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಳಿಯೂರು ಮತ್ತು ಧರ್ಮಪುರ ಎರಡೂ ಗ್ರಾಮಗಳಲ್ಲಿ ಬಿಎಂಟಿಸಿ ಬಸ್‌ಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರಿಗೆ ಮಾಹಿತಿ ನೀಡದೇ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಮಂಜುನಾಥ್ ಆರೋಪಿಸಿದರು.

ADVERTISEMENT

ಸೌಜನ್ಯಕ್ಕೂ ಆಹ್ವಾನ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಂತೆ ನಡೆಸಿದ್ದಾರೆ ಎಂದು ದೂರಿದರು.

ಗ್ರಾಮದ ಮುಖಂಡ ಕೃಷ್ಣಪ್ಪ, ಮಂಡಿಬೆಲೆ ಚಿಕ್ಕಪಿಳ್ಳಣ್ಣ, ಜಿಲ್ಲಾ ಕಾಂಗ್ರೆಸ್ ಎಸ್.ಸಿ.ವಿಭಾಗದ ಅಧ್ಯಕ್ಷ ಲೋಕೇಶ್, ಗೋವಿಂದಪ್ಪ, ಮಂಡಿಬೆಲೆ ದೇವರಾಜಪ್ಪ, ಹಳಿಯೂರು ರಘು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.