ADVERTISEMENT

ಬನ್ನೇರುಘಟ್ಟ ಉದ್ಯಾನಕ್ಕೆ ದಕ್ಷಿಣ ಆಫ್ರಿಕಾದಿಂದ ಬಂದ ಕ್ಯಾಪುಚಿನ್‌ ಕೋತಿಗಳು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:35 IST
Last Updated 16 ಡಿಸೆಂಬರ್ 2025, 2:35 IST
ದಕ್ಷಿಣ ಆಫ್ರಿಕಾದಿಂದ ಬಂದ ಕ್ಯಾಪುಚಿನ್‌ ಕೋತಿಗಳು
ದಕ್ಷಿಣ ಆಫ್ರಿಕಾದಿಂದ ಬಂದ ಕ್ಯಾಪುಚಿನ್‌ ಕೋತಿಗಳು   

ಆನೇಕಲ್: ಬನ್ನೇರುಘಟ್ಟ ಉದ್ಯಾನಕ್ಕೆ ಭಾನುವಾರ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳ ಆಗಮನವಾಗಿದೆ. 

ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಅಡಿ ದಕ್ಷಿಣ ಆಫ್ರಿಕಾದ ಇಂದುನಾ ಪ್ರೈಮೇಟ್‌ ಮತ್ತು ಪ್ಯಾರಟ್‌ ಪಾರ್ಕ್‌ನಿಂದ ಬಂದ ಎಂಟು ಕಪ್ಪು ಟೋಪಿಯ ಕ್ಯಾಪುಚಿನ್‌ ಕೋತಿಗಳನ್ನು ಭಾನುವಾರ ರಾತ್ರಿ ಉದ್ಯಾನದ ಸಿಬ್ಬಂದಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. 

ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಸೇರಿದಂತೆ ಒಟ್ಟು ಎಂಟು ಕ್ಯಾಪುಚಿನ್‌ ಕೋತಿಗಳನ್ನು ದಕ್ಷಿಣ ಆಫ್ರಿಕಾದ ಅಧಿಕಾರಿಗಳು  ಬನ್ನೇರುಘಟ್ಟಕ್ಕೆ ಹಸ್ತಾಂತರಿಸಿದರು.

ADVERTISEMENT

ಕೋತಿಗಳನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ. ಸಂಪೂರ್ಣ ಆರೋಗ್ಯ ಪರಿಶೀಲನೆಯ ಬಳಿಕ ಸಾರ್ವಜನಿಕ ಪ್ರದರ್ಶನಕ್ಕೆ ಮೃಗಾಲಯದ ಆವರಣಗಳಿಗೆ ಸ್ಥಳಾಂತರಿಸಲಾಗುವುದು ಎಂದು ಬನ್ನೇರುಘಟ್ಟ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ತಿಳಿಸಿದರು.

ಮೃಗಾಲಯದ ಪ್ರಾಣಿಗಳ ಅನುವಂಶಿಕ ವೈವಿಧ್ಯತೆ ಹೆಚ್ಚಿಸುವುದು, ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವುದು ಹಾಗೂ ವೈಜ್ಞಾನಿಕ ಸಂಶೋಧನೆಗೆ ಬೆಂಬಲ ನೀಡುವ ಸಲುವಾಗಿ ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಪಡೆದು ರಾಜ್ಯ ಮುಖ್ಯ ವನ್ಯಜೀವಿ ಪರಿಪಾಲಕರು, ಕೇಂದ್ರ ಪರಿಸರ ಅರಣ್ಯ ಸಚಿವಾಲಯ, ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋದಿಂದ ನಿರಪೇಕ್ಷಣಾ ಪತ್ರಗಳನ್ನು ಪಡೆಯಲಾಗಿದೆ. ಈ ಇಲಾಖೆಗಳ ಅನುಮತಿಯೊಂದಿಗೆ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ ಅನುಮತಿ ಪಡೆದು ಕ್ಯಾಪುಚಿನ್‌ ಕೋತಿಗಳನ್ನು ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.