ADVERTISEMENT

ಹೊಸಕೋಟೆ | ಕೊರೊನಾ ತಡೆಯುವಲ್ಲಿ ಕೇಂದ್ರ ವಿಫಲ;ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 2:26 IST
Last Updated 18 ಜೂನ್ 2020, 2:26 IST
ಹೊಸಕೋಟೆಯಲ್ಲಿ ಸಿ ಪಿ ಐ ಎಂ ಪಕ್ಷದ ಕಾರ್ಯಕರ್ತರು ತಹಶಿಲ್ದಾರ್‍ ಅವರಿಗೆ ಕೇಂದ್ರ ಸರ್ಕಾರದ ವೈಪಲ್ಯಗಳನ್ನು ವಿರೋದಿಸಿ ಮನವಿ ಪತ್ರ ನೀಡಿದರು.
ಹೊಸಕೋಟೆಯಲ್ಲಿ ಸಿ ಪಿ ಐ ಎಂ ಪಕ್ಷದ ಕಾರ್ಯಕರ್ತರು ತಹಶಿಲ್ದಾರ್‍ ಅವರಿಗೆ ಕೇಂದ್ರ ಸರ್ಕಾರದ ವೈಪಲ್ಯಗಳನ್ನು ವಿರೋದಿಸಿ ಮನವಿ ಪತ್ರ ನೀಡಿದರು.   

ಹೊಸಕೋಟೆ: ‘ಕೊರೊನಾ ವೈರಸ್ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ನಾಯಕರಾದ ವಕೀಲ ಹರೀಂದ್ರ ಆರೋಪಿಸಿದರು.

ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಕಾಏಕಿ ಲಾಕ್ ಡೌನ್ ಘೋಷಿಸಿದ್ದರಿಂದ ದೇಶದಲ್ಲಿ ಬಹಳಷ್ಟು ವಲಸೆ ಕಾರ್ಮಿಕರಿಗೆ ತೊಂದರೆಯಾಯಿತು. ಅವರಿಗೆ ಕೆಲಸವೂ ಇಲ್ಲದೇ ತಮ್ಮ ಊರುಗಳಿಗೆ ಹೋಗಲೂ ಆಗದೆ ಸಂಕಷ್ಠಕ್ಕೆ ಗುರಿಯಾದರು. ವಾಹನ ವ್ಯವಸ್ಥೆ ಇಲ್ಲದೇ ನೂರಾರು ಕಿಲೋಮೀಟರ್‌ ನಡೆದುಕೊಂಡು ಸಾಗಿದರು. ಕೆಲವರು ದಾರಿಯಲ್ಲಿ ಪ್ರಾಣ ಕಳೆದುಕೊಂಡರು. ಇದಕ್ಕೆಲ್ಲಾ ಕೇಂದ್ರ ಮುಂದಾಲೋಚನೆ ಇಲ್ಲದ ತೀರ್ಮಾನಗಳೇ ಕಾರಣವೆಂದು ಆರೋಪಿಸಿದರು.

ADVERTISEMENT

ರೈತರು ತಾವು ಬೆಳೆದ ವಸ್ತುಗಳಿಗೆ ತರಕಾರಿ, ಹಣ್ಣು ಗಳಿಗೆ ಮಾರುಕಟ್ಟೆ ಇಲ್ಲದೇ ರಸ್ತೆಗಳಲ್ಲಿ ಕೊಳೆಯುವಂತಾಯಿತು. ಇದರಿಂದ ರೈತರ ಬಾಳು ಬೀದಿಗೆ ಬಂದಿತು. ಆದರೆ ಈಗ ಸರ್ಕಾರ ಘೋಷಿಸಿರುವ ₹ 20 ಲಕ್ಷ ಕೋಟಿ ಪರಿಹಾರದಲ್ಲೂ ಯಾವುದೇ ಪ್ರಯೋಜನವಿಲ್ಲ. ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಕೇವಲ ₹ 500 ಹಾಕುತ್ತಿದ್ದು ಅದರಿಂದ ಅವರಿಗೆ ಟೀ ಕುಡಿಯಲೂ ಸಾದ್ಯವಾಗುವುದಿಲ್ಲ ಎಂದರು. ಬದಲಾಗಿ ಆದಾಯ ತೆರಿಗೆ ಪಾವತಿಸುವ ಮಿತಿಗಳ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಬರುವ ಆರು ತಿಂಗಳು ಪ್ರತಿ ತಿಂಗಳಿಗೆ ₹ 7,500 ವರ್ಗಾಯಿಸಬೇಕು. ಇದರಿಂದ ದೇಶದಲ್ಲಿ ಹಣ ಜನರ ಕೈಯಲ್ಲಿ ಓಡಾಡುತ್ತದೆ. ದೇಶದ ಆರ್ಥಿಕ ವ್ಯವಸ್ಥೆಯೂ ಸುಧಾರಿಸುತ್ತದೆ ಎಂದರು.

‘ಪ್ರತಿ ವ್ಯಕ್ತಿಗೆ ತಿಂಗಳಿಗೆ ಹತ್ತು ಕೆಜಿಯಂತೆ ಆಹಾರ ಧಾನ್ಯವನ್ನು ಉಚಿತವಾಗಿ ಮುಂದಿನ 6 ತಿಂಗಳು ನೀಡಬೇಕು ಎಂದು ಆಗ್ರಹಿಸಿದರು. ನೇಕಾರರ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಬೇಕು. ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕೂಡಲೇ ಇಳಿಸಬೇಕು’ ಎಂದರು.

‘ಕೊರೊನಾ ಮಹಾಮಾರಿಯು ವ್ಯಾಪಕವಾಗಿ ಹರಡುತ್ತಿದ್ದು ಅದನ್ನು ತಡೆಯಲು ಪ್ರತಿಯೊಬ್ಬರಿಗೂ ಪರೀಕ್ಷೆ ಮಾಡಬೇಕು. ಮತ್ತು ರಾಜ್ಯದಲ್ಲಿ ಆರೋಗ್ಯ ಪರಿಕರಗಳು, ವೆಂಟಿಲೇಟರ್‌ ಹಾಗೂ ಅಗತ್ಯ ಔಷಧಗಳ ತೀವ್ರ ಕೊರತೆ ಇದ್ದು ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ಕೇಂದ್ರ ಸರ್ಕಾರವು ಪೂರೈಸಬೇಕು ಎಂದರು.

ಸಭೆಯಲ್ಲಿ ಮುಖಂಡರಾದ ಮೋಹನ್ ಬಾಬು ಪಿ.ಎ. ವೆಂಕಟೇಶ್, ಎಸ್. ರುದ್ರಾರಾಧ್ಯ ಹರೀಶ್ ಭಾಗವಹಿಸಿದ್ದರು. ಕೊನೆಯಲ್ಲಿ ತಹಶಿಲ್ದಾರ್‌ ಪರವಾಗಿ ಶಿರಸ್ತೆದಾರ್‌ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.