ಆನೇಕಲ್ : ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಚಂದಾಪುರ ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತು ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಚಂದಾಪುರ ಬೆಂಗಳೂರು ನಗರ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ವಾಹನ ಸಂಚಾರ ಹೆಚ್ಚಾಗಿದೆ. ಚಂದಾಪುರ-ಅತ್ತಿಬೆಲೆ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸುವುದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತ ಹಲವು ಗ್ರಾಮಗಳಿದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಮತ್ತು ಕಾರ್ಮಿಕರು ಕೆಲಸ ಕಾರ್ಯಗಳಿಗೆ ತೆರಳುವುದರಿಂದ ಸಾರ್ವಜನಿಕ ಸುರಕ್ಷತೆಗೆ ಪ್ರಥಮ ಆರದ್ಯತೆ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಅನುಕೂಲವಾಗುವ ಸ್ಯಾಟಲೈಟ್ ರಿಂಗ್ ರಸ್ತೆ(ಎಸ್‌ಟಿಆರ್‌ಆರ್) ರಸ್ತೆ ನಿರ್ಮಾಣ ಹಾಗೂ 4,750ಕೋಟಿ ವೆಚ್ಚದ ರಿಂಗ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಅನುಮೋದನೆ ದೊರೆತಿದೆ. ಈ ರಸ್ತೆಯ ಅಭಿವೃದ್ಧಿಯಿಂದಾಗಿ ಆನೇಕಲ್, ಕನಕಪುರ, ಮಾಗಡಿ, ರಾಮನಗರ, ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ ಪ್ರದೇಶಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕಿ ಅರ್ಚನ, ಬಿಜೆಪಿ ಮಂಡಲ ಅಧ್ಯಕ್ಷರಾದ ಬಿ.ಬಿ.ಐ.ಮುನಿರೆಡ್ಡಿ, ಮುನಿರಾಜು, ಚಂದಾಪುರ ಪುರಸಭಾ ಅಧ್ಯಕ್ಷೆ ಶಾರದ ವರದರಾಜು, ಮುಖಂಡರಾದ ಜಿ.ನಾಗರಾಜು, ಎಸ್.ಆರ್.ಟಿ.ಅಶೋಕ್, ಪಟಾಪಟ್ ಶ್ರೀನಿವಾಸ್, ನಾಗೇಶ್ ರೆಡ್ಡಿ, ಕೃಷ್ಣಾರೆಡ್ಡಿ, ಮುರಳಿ, ಸೋಮಶೇಖರರೆಡ್ಡಿ, ಎಸ್.ಎಂ.ಪಿ.ಮರಿ ಇದ್ದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಾಲ್ಕು ಬ್ಲಾಕ್ ಸ್ಪಾಟ್ ಗುರುತಿಸಲಾಗಿದೆ. ಸಂಚಾರ ದಟ್ಟಣೆ ತಡೆಯುವ ಸಲುವಾಗಿ ಮೇಲ್ಸುತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ₹160ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿದೆ. ಚಂದಾಪುರ ರೈಲ್ವೆ ಕೆಳಸೇತುವೆ ಅಗಲೀಕರಣಕ್ಕೆ ₹60ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿದೆ. ವಾಹನ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.