ADVERTISEMENT

ಮಕ್ಕಳ ದತ್ತು ಮಾಸಾಚರಣೆ ಜಾಗೃತಿ: ಆನೇಕಲ್‌ ಗ್ರಾಮೀಣ ಭಾಗದಲ್ಲಿ ಅರಿವು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 6:38 IST
Last Updated 7 ನವೆಂಬರ್ 2025, 6:38 IST
   

ಆನೇಕಲ್: ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ನವೆಂಬರ್‌ ತಿಂಗಳನ್ನು ಅಂತರರಾಷ್ಟ್ರೀಯ ದತ್ತು ಮಾಸಾಚರಣೆಯಾಗಿ ಆರಿಸಲಾಗುತ್ತಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಂಗಳೂರು ನಗರ ಪಶ್ಚಿಮ(ಆನೇಕಲ್‌) ವತಿಯಿಂದ ಮಕ್ಕಳ ದತ್ತು, ಮಕ್ಕಳ ಮಾರಾಟ ಅಪರಾಧದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆನೇಕಲ್‌ ತಾಲ್ಲೂಕಿನ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ತಿಳಿಸಿದರು.

ಮಕ್ಕಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ಮಾರಾಟ ಮಾಡುವವರು ಮತ್ತು ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ – 2015ರ ಸೆಕ್ಷನ್‌ 80 ಮತ್ತು 81ರ ಅನ್ವಯ ಐದು ವರ್ಷ ಸೆರೆಮನೆ ಮತ್ತು ₹1ಲಕ್ಷ ದಂಡ ವಿಧಿಸಲಾಗುವುದು. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಮೂರು ವರ್ಷ ಸೆರೆಮನೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆನೇಕಲ್‌ ತಾಲ್ಲೂಕಿನಲ್ಲಿ ಅನಾಥ ಮತ್ತು ಪರಿತ್ಯಕ್ತ ಮಕ್ಕಳ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು(080-22076833) ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಮಕ್ಕಳ ಹಕ್ಕುಗಳ ರಕ್ಷಣೆ ಸಮಾಜದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಅವರ ಹಕ್ಕುಗಳ ರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಬಾಲಕಾರ್ಮಿಕರ ನಿರ್ಮೂಲನಾ ಕಾಯ್ದೆ, ಬಾಲನ್ಯಾಯ ಕಾಯ್ದೆ ಸೇರಿದಂತೆ ಮಕ್ಕಳ ಹಕ್ಕು ಮತ್ತು ರಕ್ಷಣೆಗೆ ಸಂಬಂಧಪಟ್ಟ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಡಿಸಿಪಿಓ ಆಶಾ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.