
ದೇವನಹಳ್ಳಿ: ‘ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಿಮ್ಮ ಹಕ್ಕನ್ನು ನೀವು ಕೇಳಿ ಪಡೆಯಲು ಸಾಧ್ಯ’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಹೇಳಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಂಗಳವಾರ ಆಯೋಜಿಸಲಾಗಿದ್ದ ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಕುತೂಹಲ ಮತ್ತು ಆಸಕ್ತಿದಾಯಕವಾಗಿರುತ್ತದೆ. ಪ್ರತಿಯೊಂದು ಮಕ್ಕಳಿಗೂ 18 ವರ್ಷ ಆಗುವ ತನಕ ಆರೋಗ್ಯ, ಶಿಕ್ಷಣ, ರಕ್ಷಣೆ ಸಿಗಬೇಕು. ವಿದ್ಯಾರ್ಥಿ ದೆಸೆಯಿಂದಲೆ ಸಮಾಜದ ಕುರಿತು ಚಿಂತನೆ, ಕಾಳಜಿ ವಹಿಸಬೇಕು. ಇದರಿಂದ ನಮ್ಮ ಸಮಾಜ ಹಾಗೂ ದೇಶದ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ನಿಮಗೆ ಯಾವುದೇ ಸಮಸ್ಯೆ ಅಥವಾ ತೊಂದರೆಯಾದಾಗ ಕೂಡಲೇ ಮಕ್ಕಳ ಸಹಾಯವಾಣಿ 1098ಗೆ ಸಂಪರ್ಕಿಸಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗದೆ ಇದೀಗ ಯಾವುದೇ ಭಯ ಪಡದೇ ಆಯೋಗದ ಸಹಾಯವಾಣಿಗೆ ಕರೆ ಮಾಡಿ ಎಂದರು.
ಮಕ್ಕಳು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು. ದೂರದ ಊರಿನಿಂದ ಶಾಲೆಗೆ ಬರುವ ಮಕ್ಕಳು ಶಾಲೆಗೆ ತಡವಾಗುತ್ತದೆ ಎಂದು ಬೆಳಗಿನ ಸಮಯ ಉಪಹಾರ ಸೇವಿಸದೆ ಶಾಲೆಗೆ ಬರುತ್ತಿರುವ ವಿಷಯ ಹೆಚ್ಚಾಗಿ ಕೇಳಿ ಬಂದಿದೆ. ಈ ಕುರಿತು ಆಯೋಗದೊಂದಿಗೆ ಮಾತನಾಡಿ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲು ತಿಳಿಸಲಾಗುವುದು. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಮುಖ್ಯ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಮಕ್ಕಳಿಗೆ ರಸ್ತೆ ದಾಟಲು ಕಷ್ಟವಾಗುತ್ತದೆ. ಶಾಲೆಗಳ ಹತ್ತಿರ ವಾಹನಗಳ ವೇಗ ಮಿತಿಯನ್ನು ಕಡಿಮೆ ಮಾಡಲು ಹಾಗೂ ರಸ್ತೆಯಲ್ಲಿ ಹಂಪ್ಸ್ ಮತ್ತು ನಾಮಫಲಕ ಹಾಕಿಸಲು ಸೂಚಿಸಲಾಗಿದೆ.
ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಬೇಕು. ಲ್ಯಾಬ್ ಮತ್ತು ಗ್ರಂಥಾಲಯ ವ್ಯವಸ್ಥೆ ಇರಬೇಕು. ಪ್ರತಿದಿನ ಪತ್ರಿಕೆ ಹಾಕಿಸಬೇಕು. ಬಿರುಕು ಬಿಟ್ಟ ಅಥವಾ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಬಾರದು. ಹಾಸ್ಟೆಲ್ ವಾರ್ಡನ್ ಮತ್ತು ಶಿಕ್ಷಕರು ಮಕ್ಕಳಿಗೆ ಕಿರುಕುಳ ನೀಡಬಾರದು. ಆ ರೀತಿ ನಡೆದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ದೇವನಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕವಿತಾ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ನಂಜಪ್ಪ, ಜಿಲ್ಲಾ ಪಂಚಾಯಿತಿ ಸಹಾಯಕ ನಿರ್ದೇಶಕ ದುರ್ಗಪ್ಪ, ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.