ದಾಬಸ್ ಪೇಟೆ: ಕುಡಿಯುವ ನೀರು ಒದಗಿಸಿ, ಶಾಲೆಯ ಪಕ್ಕದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಿಸಿ, ಶಾಲೆಗೆ ಗೇಟ್ ಅಳವಡಿಸಿ, ಸೈಕಲ್ ಕೊಡಿಸಿ, ಶಾಲೆಯ ಬಳಿ ಕಸ ಇದೆ ತೆರವು ಮಾಡಿ, ಬೀದಿ ನಾಯಿಗಳ ಕಾಟದಿಂದ ಶಾಲೆಗೆ ಹೋಗಲು ಭಯ...
ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ‘ಮಕ್ಕಳ ಗ್ರಾಮ ಸಭೆ’ಯಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೊನ್ನೇನಹಳ್ಳಿ ತಾಂಡ್ಯ, ಬರಗೇನಹಳ್ಳಿ, ಕೆ.ಜಿ.ಶ್ರೀನಿವಾಸಪುರ, ಕೆಂಗಲ್ ಗೊಲ್ಲರಹಟ್ಟಿ, ಶ್ರೀಪತಿಹಳ್ಳಿ, ವೀರಸಾಗರ ಗ್ರಾಮಗಳ ಶಾಲೆಗಳ ಮಕ್ಕಳು ತಮ್ಮ ಹತ್ತಾರು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
‘ಪಂಚಾಯಿತಿ ಅಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶಾಲೆಗಳ ಹತ್ತಿರ ತೆರಳಿ ಪರಿಶೀಲನೆ ನಡೆಸಿ ಪರಿಹಾರ ನೀಡುತ್ತಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ಶ್ರೀನಿವಾಸ್ ಭರವಸೆ ನೀಡಿದರು.
ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿದ್ದ ಪಶುಸಂಗೋಪನಾ ಇಲಾಖೆಯ ಶ್ರೀನಿವಾಸ್ ಮಾತನಾಡಿ, ‘ಮಕ್ಕಳು ತಮ್ಮ ಜೀವನ, ಶಾಲೆ, ಆರೋಗ್ಯ, ಸುರಕ್ಷತೆ ಮತ್ತು ಅಭಿವೃದ್ದಿ ಸಂಬಂಧಿಸಿದ ಬೇಡಿಕೆ ಕುಂದುಕೊರತೆಗಳನ್ನು ನೇರವಾಗಿ ಹೇಳಿ, ಸಾಕಷ್ಟು ಸಮಸ್ಯೆಗಳನ್ನು ಸಭೆಯ ಮುಂದೆ ಬಂದಿವೆ’ ಎಂದರು.
‘ಬಾಲ್ಯ ವಿವಾಹ, ಬಾಲ ಕಾರ್ಮಿಕ, ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಶೋಷಣೆ, ಬಲತ್ಕಾರ ತಡೆಯಲು ಸ್ವಯಂ ರಕ್ಷಣೆಗೆ ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಮಕ್ಕಳ ಸಹಾಯವಾಣಿ 1098ಗೆ ದೂರವಾಣಿಗೆ ಕರೆ ಮಾಡಿ, ಇಲ್ಲವೇ ಗ್ರಾಮ ಪಂಚಾಯಿತಿ, ಪೊಲೀಸರ ಗಮನಕ್ಕೆ ತರುವ ಪ್ರಯತ್ನ ಮಾಡಬೇಕು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಶಂಕರ್ ಹೇಳಿದರು.
ಹೊನ್ನೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಪುಟ್ಟರುದ್ರಾರಾಧ್ಯ ಮಾತನಾಡಿ, ಅಂಗವಿಕಲರ ಬಗ್ಗೆ ಕೇವಲ ಕನಿಕರ ಬೇಡ. ಈ ಮಕ್ಕಳಿಗೆ ಉತ್ತಮ ಅವಕಾಶ ನೀಡಿದರೆ ಮುಂದೆ ಅವರು ಸಹ ದೇಶದ ಆಸ್ತಿಯಾಗುತ್ತಾರೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಶಿವಕುಮಾರ್ ನಾಯಕ್, ಸದಸ್ಯರಾದ ರೇವಮ್ಮ, ಚಂದ್ರಶೇಖರ್, ಹನುಮಂತರಾಯಪ್ಪ, ವಸಂತ, ಉಮಾದೇವಿ, ಅಂಗನಾಡಿ ಕಾರ್ಯಕರ್ತೆಯರು, ಶಿಕ್ಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.