ದೊಡ್ಡಬಳ್ಳಾಪುರ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ವೈಯಕ್ತಿಕ ಸುಖದ ತ್ಯಾಗ, ದೃಢ ಸಂಕಲ್ಪ ಹಾಗೂ ಕಠಿಣ ಪರಿಶ್ರಮ ಇದ್ದರೆ ಯಾರು ಬೇಕಾದರೂ ಯಶಸ್ಸು ಸಾಧಿಸಬಹುದು. ಇದಕ್ಕೆ ಮಾನಸಿಕವಾಗಿ ಪಕ್ವವಾಗಿರಬೇಕು ಎಂದು ಪ್ರಾಧ್ಯಾಪಕ ಸತೀಶ್ ಜೋಗ ಹೇಳಿದರು.
ನಗರದಲ್ಲಿ ಆರಂಭಗೊಂಡಿರುವ ಸೌಭಾಗ್ಯ ಸೇವಾ ಟ್ರಸ್ಟ್‌ನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಬೆಳದಿಂಗಳು ಸ್ಟಡಿ ಸರ್ಕಲ್ ಏರ್ಪಡಿಸಿದ್ದ ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ದೃಢ ಮನಸ್ಸಿನಿಂದ ಸಾಧನೆ ಮಾಡುವವರಿಗೆ ಅಸಾಧ್ಯವಾದುದ್ದು ಯಾವುದೂ ಇಲ್ಲ, ಸಾಧಿಸುವ ಛಲವಿರಬೇಕಷ್ಟೆ. ಸೋತರೆ ಕುಗ್ಗದೆ ಮತ್ತೆ ಪ್ರಯತ್ನ ಮಾಡಿದರೆ ಸೋಲೂ ಗೆಲುವಾಗಿ ಪರಿವರ್ತನೆಗೊಳ್ಳುತ್ತದೆ. ಯಾವ ವಿಷಯವನ್ನು ಎಷ್ಟು ಓದಬೇಕು ಎನ್ನುವುದು ಎಷ್ಟು ಮುಖ್ಯವೋ, ಯಾವ ವಿಷಯವನ್ನು ಓದಬಾರದು ಎಂಬುದರ ಅರಿವು ಅಗತ್ಯ. ಸ್ಪರ್ಧಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಸಮಯ ನಿರ್ವಹಣೆಯ ತಂತ್ರವನ್ನು ರೂಪಿಸಿಕೊಂಡರೆ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ. ಸಕಾರಾತ್ಮಕ ಮನೋಭಾವದಿಂದ ಹೋರಾಡಿದರೆ ಬದುಕಿನ ಪ್ರತಿಯೊಂದು ಹಂತದಲ್ಲೂ ಸಾಧನೆ ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ವಿಶ್ವನಾಥ್, ಗುರಿ ದೊಡ್ಡದಾದಷ್ಟೂ ಶಿಸ್ತು, ಸಮಯ ನಿರ್ವಹಣೆ, ನಿತ್ಯದ ಅಧ್ಯಯನ ಅಭ್ಯಾಸವೂ ಗಟ್ಟಿಯಾಗಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕೇವಲ ಜ್ಞಾನದಿಂದ ಮಾತ್ರವಲ್ಲ, ಆತ್ಮವಿಶ್ವಾಸ ಮತ್ತು ಮನೋಬಲದಿಂದಲೂ ಬರುತ್ತದೆ ಎಂದರು.
ತರಬೇತುದಾರರಾದ ನೆಲಮಂಗಲ ಗೋವಿಂದರಾಜು, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ರೀತಿ, ಇಂದಿನ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ರೀತಿಯನ್ನು ವಿವರವಾಗಿ ತಿಳಿಸಿದರು. ಓದಿನ ಜೊತೆಗೆ ವ್ಯಕ್ತಿತ್ವ ವಿಕಾಸ, ಸಂವಹನ ಕೌಶಲ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಮಾನ ಆದ್ಯತೆ ನೀಡಿದರೆ ವಿದ್ಯಾರ್ಥಿಗಳು ಬೇಗ ಗುರಿ ಮುಟ್ಟಬಹುದು ಎಂದರು.
ಬೆಳದಿಂಗಳು ಸ್ಟಡಿ ಸರ್ಕಲ್ ಕಾರ್ಯಕ್ರಮ ಸಂಯೋಜಕ ಮಾಳವ ನಾರಾಯಣ್ , ಶೀಘ್ರದಲ್ಲಿಯೇ ಕೆಪಿಎಸಿಯಿಂದ ಪಿ.ಸಿ, ಪಿಎಸ್‌ಐ, ಎಸ್‌ಡಿಎ, ಎಫ್‌ಡಿಎ ಉಪನ್ಯಾಸಕ ಸೇರಿದಂತೆ ಹಲವು ಹುದ್ದೆಗಳಿಗೆ ಅಧಿಸೂಚನೆ ಹೊರ ಬೀಳಲಿವೆ. ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಯನ್ನು ಪಡೆಯಲು ಕ್ರಮಬದ್ಧ ತರಬೇತಿ ಪಡೆಯುವುದು ಅವಶ್ಯಕ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ್, ಬೆಳದಿಂಗಳು ಸೌಭಾಗ್ಯ ಸೇವಾ ಟ್ರಸ್ಟ್‌ನ ಜಿ.ರಾಜಗೋಪಾಲ, ಡಾ.ಪರಮೇಶ್ವರ್, ರಾಜೇಂದ್ರ, ಮಾರ್ಗರೆಟ್ ಶರ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.