ADVERTISEMENT

ಅಭಿವೃದ್ಧಿ ರಾಜಕಾರಣ ಮಾಡಬೇಕೆ ಹೊರತು ಸಿ.ಡಿ ರಾಜಕಾರಣವಲ್ಲ: ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 4:54 IST
Last Updated 2 ಫೆಬ್ರುವರಿ 2023, 4:54 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಆನೇಕಲ್: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹತಾಶೆಗೊಂಡಿರುವ ರಮೇಶ್‌ ಜಾರಕಿಹೊಳಿ ಅವರು ಗೊಂದಲ ಹೇಳಿಕೆ ನೀಡುತ್ತಿದ್ದಾರೆ. ಅಭಿವೃದ್ಧಿಯ ರಾಜಕಾರಣವನ್ನು ಮಾಡಬೇಕೆ ಹೊರತು ಸಿ.ಡಿ ರಾಜಕಾರಣವಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ಚಂದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆಯರಿಗೆ ಗೌರವ ನೀಡುವುದು ಭಾರತೀಯರ ಸಂಸ್ಕೃತಿ. ಆದರೆ ವಿಷಕನ್ಯೆ ಎಂಬ ಪದ ಬಳಸುವುದು ಸರಿಯಲ್ಲ. ಬಿಜೆಪಿ ಶಾಸಕ ಯತ್ನಾಳ್‌ ಅವರೇ ಸಿ.ಡಿ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ರಮೇಶ್‌ ಜಾರಕಿಹೊಳಿ ಅವರು ಗೊಂದಲದ ಹೇಳಿಕೆಗಳನ್ನು ನೀಡಬಾರದು’ ಎಂದು ಹೇಳಿದರು.

‘ಸಹಕಾರ ಇಲಾಖೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ರಮೇಶ್‌ ಜಾರಕಿಹೊಳಿ ಅವರು ಆರೋಪಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿದೆ. ಇಲ್ಲಯವರೆಗೆ ಏಕೆ ಈ ಬಗ್ಗೆ ಮೌನ ವಹಿಸಿದ್ದರು ಎಂದು ಜನತೆಗೆ ತಿಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಡಿ.ಕೆ.ಶಿವಕುಮಾರ್‌ ಅವರು ಶಾಸಕರಾಗದಿದ್ದಾಗ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಹೇಳುವುದು ಸರಿಯಲ್ಲ. ಚುನಾವಣೆ ಸಿದ್ಧತೆ, ಪಕ್ಷ ಸಂಘಟನೆಯಲ್ಲಿ ಶಿವಕುಮಾರ್‌ ಅವರ ವೇಗವನ್ನು ಕಂಡು ಬಿಜೆಪಿಗೆ ನಡುಕಹುಟ್ಟಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ’ ಎಂದರು.

ರಾಜ್ಯ ಸರ್ಕಾರದ ಕೆಲಸಗಳ ಬಗ್ಗೆ ಹೈಕೋರ್ಟ್‌ ಛೀಮಾರಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಗುಂಡಿಗಳು, ಶಾಲಾ ಸಮವಸ್ತ್ರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿದರೂ ದಪ್ಪ ಚರ್ಮದ ಬಿಜೆಪಿ ಸರ್ಕಾರ ಕಾರ್ಯನಿರ್ವಹಿಸುವಲ್ಲಿ ಕಾಳಜಿ ತೋರುತ್ತಿಲ್ಲ ಎಂದರು.

ಷೇರಿನಂತೆ ಕಮಿಷನ್‌ ಏರಿಕೆ
‘ಬಿಜೆಪಿ ಸರ್ಕಾರದಲ್ಲಿ ಶೇ.40 ರಷ್ಟು ಕಮಿಷನ್‌ ನಡೆಯುತ್ತಿದ್ದು. ಷೇರು ಮಾರುಕಟ್ಟೆ ಷೇರಿನ ಬೆಲೆ ಏರಿಕೆಯಾದಂತೆ ಕಮಿಷನ್‌ ಏರಿಕೆಯಾಗುತ್ತಿದೆ. ಚುನಾವಣೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ’ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.

ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಅವರು ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಆದರೆ ಚುನಾವಣೆ ಮುಗಿದ ನಂತರ ರಾಜ್ಯದತ್ತ ತಿರುಗಿ ನೋಡುವುದಿಲ್ಲ ಎಂದು ಟೀಕಿಸಿದರು.

ಪ್ರಜಾಪ್ರಭುತ್ವದ ಉಳಿವಿಗೆ ನಡೆದ ಯಾತ್ರೆ
ರಾಹುಲ್‌ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ರಾಜಕೀಯ ಯಾತ್ರೆಯಲ್ಲ. ದ್ವೇಷ, ನಿರುದ್ಯೋಗದ ವಿರುದ್ಧ ಹೋರಾಟ. ಸಾರ್ವಭೌಮತ್ವ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತ್‌ ಜೋಡೋ ಯಾತ್ರೆ ನಡೆಸಲಾಗಿದೆ ರಾಮಲಿಂಗಾರೆಡ್ಡಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.