
ದೇವನಹಳ್ಳಿ: ಅಕ್ಕ ಪಡೆ, ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭದ ಜೊತೆಗೆ ಮಹಿಳೆಯರಿಗಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಲಾಗುತ್ತಿದೆ ಎಂದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಂಗಳೂರಿನಲ್ಲಿ ನವೆಂಬರ್ 28ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಸಂಬಂಧ ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಹಕಾರ ಸಂಘದ ಬ್ಯಾಂಕ್‌ನಲ್ಲಿ ₹30 ಸಾವಿರದಿಂದ ₹3 ಲಕ್ಷದವರೆಗೆ ಸಾಲ ನೀಡಲಾಗುವುದು. ರಾಷ್ಟ್ರೀಕೃತ ಬ್ಯಾಂಕ್ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಖಾಸಗಿ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 2.18 ಲಕ್ಷ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದು, ಇದುವರೆಗೆ ₹900 ಕೋಟಿ ಸಂದಾಯವಾಗಿದೆ ಎಂದು ತಿಳಿಸಿದರು.
ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಇಂದು ವಿಶ್ವದ ಹಿರಿಯಣ್ಣ ಆಗುವ ಮಟ್ಟಕ್ಕೆ ಭಾರತ ಬೆಳೆದಿದೆ ಎಂದರೆ ಅದಕ್ಕೆ ಪಕ್ಷದ ನೀತಿ, ಸಿದ್ದಾಂತ, ಯೋಜನೆಗಳೇ ಕಾರಣ. ಕಾಂಗ್ರೆಸ್ ಎಂದರೆ ಜನರ ಪರ, ಮಹಿಳೆಯರ ಪರ.
ನವೆಂಬರ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಮುಂದಿನ 50 ವರ್ಷಕ್ಕೆ ಪೀಠಿಕೆ ಹಾಕಿದಂತೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ಮಂಜುನಾಥ್, ಆಲೂರು ದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಜಿಲ್ಲಾಧಿಕಾರಿ ಬಸವರಾಜು, ಜಿಪಂ ಸಿಇಒ ಕೆ.ಎನ್.ಅನುರಾಧ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಂ.ಮುದ್ದಣ್ಣ ಉಪಸ್ಥಿತರಿದ್ದರು.
ಮಹಿಳಾ ಪರ ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ದಲ್ಲಿ ನಮ್ಮ ಸರ್ಕಾರ ಬಂದಾಗಲೆಲ್ಲಾ ಮಹಿಳೆಯರ ಪರ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರಿಂದ ಹಿಡಿದು ಸಿದ್ದರಾಮಯ್ಯ ಅವರ ವರೆಗೂ ಮಹಿಳೆಯರ ಪರ ಚಿಂತನೆ ಯೋಜನೆಗಳನ್ನು ರೂಪಿಸಲಾಗಿದೆ. ಇಂದಿರಾ ಗಾಂಧಿಯವರ ಪರಿಕಲ್ಪನೆಯಂತೆ ಕರ್ನಾಟಕ ರಾಜ್ಯದಲ್ಲಿ ಮೈಸೂರಿನ ಟಿ.ನರಸೀಪುರದಲ್ಲಿ ಅಂಗನವಾಡಿ ಕೇಂದ್ರ ಆರಂಭಿಸಲಾಯಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.