ADVERTISEMENT

ಹೆಬ್ಬಗೋಡಿ: ಪಿಜಿಯೊಥೆರಪಿಸ್ಟ್‌ ಒಬ್ಬರಿಗೆ ಕೋವಿಡ್ –19 ದೃಢ

​ಪ್ರಜಾವಾಣಿ ವಾರ್ತೆ
Published 19 ಮೇ 2020, 15:36 IST
Last Updated 19 ಮೇ 2020, 15:36 IST
ಆನೇಕಲ್‌ ತಾಲ್ಲೂಕಿನ ಅನಂತನಗರದ ಸಿದ್ಧಾರ್ಥ ಶ್ರೀನಿಲಯ ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್ –19 ದೃಢಪಟ್ಟಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಲಾಗಿದೆ
ಆನೇಕಲ್‌ ತಾಲ್ಲೂಕಿನ ಅನಂತನಗರದ ಸಿದ್ಧಾರ್ಥ ಶ್ರೀನಿಲಯ ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್ –19 ದೃಢಪಟ್ಟಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಲಾಗಿದೆ   

ಆನೇಕಲ್:ತಾಲ್ಲೂಕಿನ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ಅನಂತನಗರದ ಸಿದ್ಧಾರ್ಥ ಶ್ರೀನಿಲಯ ಅಪಾರ್ಟ್‌ಮೆಂಟ್‌ನಲ್ಲಿ ಕೋವಿಡ್ –19 ದೃಢಪಟ್ಟಿದ್ದು ನಾರಾಯಣ ಹೃದಯಾಲಯದಲ್ಲಿ ದಾಖಲು ಮಾಡಲಾಗಿದೆ.

ಪಾಸಿಟಿವ್‌ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ ಸುತ್ತಮುತ್ತ ನೂರು ಮೀಟರ್‌ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಸಿದ್ಧಾರ್ಥ ಶ್ರೀನಿಲಯ, ವಿ ಮ್ಯಾಕ್ಸ್‌ ಅಪಾರ್ಟ್‌ಮೆಂಟ್‌ ಸೇರಿದಂತೆ ಮೂರು ಅಪಾರ್ಟ್‌ಮೆಂಟ್‌ಗಳನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಹೆಬ್ಬಗೋಡಿ ನಗರಸಭೆ ತಿಳಿಸಿದೆ.

ಸೀಲ್‌ಡೌನ್‌ ಪ್ರದೇಶಕ್ಕೆ ಸೋಂಕು ನಿವಾರಕ ಔಷಧ ಸಿಂಪಡಿಸಲಾಗಿದೆ. ಪ್ರತಿ ಅಪಾರ್ಟ್‌ಮೆಂಟ್‌ನಲ್ಲಿ ಮೂರು ಮಂದಿಯನ್ನು ಗುರುತಿಸಲಾಗಿದ್ದು ಅವರಿಗೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ. ಅಪಾರ್ಟ್‌ಮೆಂಟ್‌ನ ನಿವಾಸಿಗಳು ಹೆಬ್ಬಗೋಡಿ ನಗರಸಭೆ ಹೆಲ್ಪ್‌ಲೈನ್‌ಗೆ ಕರೆ ಮಾಡಿದರೆ ಅವಶ್ಯಕ ವಸ್ತುಗಳನ್ನು ತಲುಪಿಸಲಾಗುವುದು. 14 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಸೀಲ್‌ಡೌನ್‌ ಮಾಡಿರುವ ಪ್ರದೇಶದ ಪ್ರತಿಯೊಬ್ಬರನ್ನು ತಪಾಸಣೆ ಮಾಡಿದ್ದಾರೆ.

ADVERTISEMENT

ಸೋಂಕಿತ ವ್ಯಕ್ತಿ ಕೇಸ್‌ ನಂ.1236 ಆಗಿದೆ. ಈ ವ್ಯಕ್ತಿಯು ತಮಿಳುನಾಡು ಮೂಲದವರಾಗಿದ್ದು ಮೇ 8ರಂದು ಕರ್ನಾಟಕಕ್ಕೆ ಬಂದಿದ್ದಾರೆ. ವೃತ್ತಿಯಲ್ಲಿ ಫಿಸಿಯೊಥೆರಫಿಸ್ಟ್‌ ಆಗಿರುವ ಇವರು ಮಾರತಹಳ್ಳಿ, ಬೇಗೂರು, ಚಂದಾಪುರ ಜಿಪಿಆರ್‌ ಬಡಾವಣೆಗಳಿಗೆ ಭೇಟಿ ನೀಡಿದ್ದಾರೆ. ಪತ್ನಿ ಸೇರಿದಂತೆ ಪ್ರಾಥಮಿಕ ಸಂಪರ್ಕ ಹೊಂದಿರುವ 13 ಮಂದಿ ಮತ್ತು ದ್ವಿತೀಯ ಸಂಪರ್ಕ ಹೊಂದಿರುವ 7 ಮಂದಿಯನ್ನು ಕ್ವಾರೆಂಟೈನ್‌ ಮಾಡಲಾಗಿದ್ದು ಅವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿದೆ. ಇವರ ತಪಾಸಣೆ ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಜ್ಞಾನಪ್ರಕಾಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.