ಕನಸವಾಡಿ (ದೊಡ್ಡಬಳ್ಳಾಪುರ): ಪೋಷಕರಲ್ಲಿ ಮೊಬೈಲ್ ಬಳಕೆ ಗೀಳು ಹೆಚ್ಚಾದಾಗ ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ಪೋಷಕರು ಉತ್ತಮ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಮಕ್ಕಳಲ್ಲಿ ಬೆಳೆಸಬೇಕು ಎಂದು ಹಾಸ್ಯ ಕಲಾವಿದ ಮೈಸೂರು ರಮಾನಂದ್ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಕನಸವಾಡಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹೊಂಗಿರಣ ಸಮಾನ ಮನಸ್ಕರ ಸಂಘದ ವತಿಯಿಂದ ನಡೆದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ತಮ್ಮ ಕನಸು ನನಸು ಮಾಡಲು ಸಂಘ, ಸಂಸ್ಥೆಗಳು ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ. 15 ವರ್ಷಗಳಿಂದ ನೂರಾರು ಜನ ಒಂದೇ ಸಂಘದಲ್ಲಿ ನಿರಂತರವಾಗಿ ಉಳಿತಾಯ ಮಾಡುವುದರ ಜತೆ ಅನೇಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣದ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾಂಸ್ಕೃತಿಕ ಚಿಂತಕ ಡಾ.ಎಸ್.ರಾಮಲಿಂಗೇಶ್ವರ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಮಾತ್ರ ಇಂದಿಗೂ ಸಂಸ್ಕೃತಿ, ಆಚರಣೆ ಉಳಿದಿದೆ. ಬದಲಾವಣೆ ಅನಿವಾರ್ಯ ಇದ್ದರೂ ನಾಡು ನುಡಿ ಭಾಷೆ ಬಳಕೆ ಕಡಿಮೆಯಾಗಬಾರದು ಎಂದರು.
ನಿವೃತ್ತ ಶಿಕ್ಷಕ ಪಿ.ತಿಮ್ಮೇಗೌಡ, ಹಿರಿಯ ಕಲಾವಿದ ಅಣ್ಣಯ್ಯಪ್ಪ, ಪ್ರಗತಿಪರ ರೈತ ಆರ್.ಸೂರ್ಯಪ್ರಕಾಶ್, ನಿವೃತ್ತ ಯೋಧ ಎಂ.ಆರ್ ಶ್ರೀನಿವಾಸ್, ಸಹ ಪ್ರಾಧ್ಯಾಪಕ ಗಿರೀಶ್, ಬಾಲ ಪ್ರತಿಭೆ ಎನ್.ಎಸ್.ಭವ್ಯ, ವಿದ್ಯಾರ್ಥಿ ಕೆ.ಎನ್.ಸುದೀಪ್ ಅವರನ್ನು ಸನ್ಮಾನಿಸಲಾಯಿತು.
ಮಧುರೆ ಹೋಬಳಿ ವ್ಯಾಪ್ತಿಯಲ್ಲಿ ಪಿಯು ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ವು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉಪೇಂದ್ರರಾವ್, ಹೊಂಗಿರಣ ಸಮಾನ ಮನಸ್ಕರ ಸಂಘದ ಗೌರವ ಅಧ್ಯಕ್ಷ ಜಿ.ಹನುಮಂತರಾಯಪ್ಪ, ಅಧ್ಯಕ್ಷ ಟಿ.ರಂಗಸ್ವಾಮಿ, ಉಪಾಧ್ಯಕ್ಷ ಪಾರ್ಥಸಾರಥಿ, ಶನಿಮಹಾತ್ಮ ದೇವಾಲಯ ಸಮಿತಿ ಅಧ್ಯಕ್ಷ ಸತ್ಯನಾರಾಯಣ, ವಾಣಿಜ್ಯ ತೆರಿಗೆ ಅಧಿಕಾರಿ ಟಿ.ಸಿ.ವೆಂಕಟಾಚಲಪತಿ, ಕಂದಾಯ ಇಲಾಖೆ ಅಧಿಕಾರಿ ಎನ್.ಪ್ರಕಾಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.