
ದೇವನಹಳ್ಳಿ: ಪಟ್ಟಣದ ವೇಣುಗೋಪಾಲ ದೇವಾಲಯದಲ್ಲಿ ಮಂಗಳವಾರ ನಡೆದ ಜಾತ್ರಾ ಮಹೋತ್ಸವ ಭಕ್ತಿಭಾವ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ವೈಭವದ ಸಂಗಮವಾಗಿ ಕಂಗೊಳಿಸಿತು. ಬೆಳಗ್ಗಿನಿಂದ ಸಂಜೆಯವರೆಗೂ ಧಾರ್ಮಿಕ ವಿಧಿವಿಧಾನಗಳು ನಡೆದವು.
ಹಬ್ಬದ ಸಂಭ್ರಮಕ್ಕೆ ತಕ್ಕಂತೆ ದೇವಾಲಯದ ಗೋಪುರ, ಕಂಬ ಹಾಗೂ ಪ್ರಾಂಗಣವನ್ನು ವಿವಿಧ ಬಗೆಯ ಹೂವು, ತಳಿರು–ತೋರಣಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಸುತ್ತಮುತ್ತ ಹಬ್ಬದ ಕಳೆ ಮಿಂಚುತ್ತಿದ್ದು, ಕೋಟೆ ಆವರಣವೇ ಭಕ್ತಿಸಾಗರದಂತಾಗಿ ಮಾರ್ಪಟ್ಟಿತ್ತು.
ಲಡ್ಡು ಅಲಂಕಾರದಲ್ಲಿ ದಿವ್ಯಮೂರ್ತಿ: ರಥೋತ್ಸವದ ವಿಶೇಷ ಆಕರ್ಷಣೆಯಾಗಿ ರುಕ್ಮಿಣಿ–ಸತ್ಯಭಾಮ ಸಮೇತ ವೇಣುಗೋಪಾಲಗೆ ಲಡ್ಡು ಅಲಂಕಾರ ಮಾಡಲಾಗಿತ್ತು.
ತಾಲ್ಲೂಕು ಆಡಳಿತದ ಸುಪರ್ದಿಯಲ್ಲಿರುವ ಅಪರೂಪದ ಆಭರಣಗಳನ್ನು ಖಜಾನೆಯಿಂದ ಹೊರತಂದು ಮೂರ್ತಿಗೆ ತೊಡಿಸಿ ಪೂಜೆ ನೆರವೇರಿಸಲಾಯಿತು. ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ತಹಶೀಲ್ದಾರ್ ಎಂ. ಅನಿಲ್, ಪಂಚ ಗ್ಯಾರಂಟಿ ಯೋಜನೆ ಸಮಿತಿ ತಾಲ್ಲೂಕು ಅಧ್ಯಕ್ಷ ಸಿ. ಜಗನ್ನಾಥ್ ಸೇರಿದಂತೆ ಪಟ್ಟಣದ ಗಣ್ಯರ ನೇತೃತ್ವದಲ್ಲಿ ಆಭರಣಗಳನ್ನು ದೇವಾಲಯಕ್ಕೆ ತರಲಾಯಿತು.
ಸುಪ್ರಭಾತ ಸೇವೆ, ತೋಮಾಲೆ ಸೇವೆ, ನವಗ್ರಹ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ವಿವಿಧ ಸಮುದಾಯದ ಗಣ್ಯರು ಈ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದರು.
ಸಂಪ್ರದಾಯದಂತೆ ಬಿದಲೂರು ಗ್ರಾಮಸ್ಥರು ಭವ್ಯ ರಥವನ್ನು ಅಣಿಗೊಳಿಸಿದರು. ಉತ್ಸವ ಮೂರ್ತಿಗೆ ಎಲೆ ಕೃಷ್ಣಪ್ಪನವರ ಕುಟುಂಬಸ್ಥರು, ತಹಶೀಲ್ದಾರ್ ಎಂ. ಅನಿಲ್, ಯಾದವ ಕುಲದ ಪ್ರಮುಖರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥವು ನಿಧಾನವಾಗಿ ಸಾಗುತ್ತಿದ್ದಂತೆ ಭಕ್ತರ ಜಯಘೋಷ, ಮಂಗಳವಾದ್ಯಗಳ ನಾದ ಹಾಗೂ ಗೋವಿಂದ ನಾಮಸ್ಮರಣೆ ಇಡೀ ಪರಿಸರವನ್ನು ಆವರಿಸಿತು.
ಭಕ್ತರು ರಥಕ್ಕೆ ಬಾಳೆಹಣ್ಣು, ಧವನ ಸಮರ್ಪಿಸಿ ತಮ್ಮ ಇಷ್ಟಾರ್ಥ ನೆರವೇರುವಂತೆ ಪ್ರಾರ್ಥಿಸಿದರು. ರಥೋತ್ಸವಕ್ಕೂ ಮುನ್ನ ದೇಗುಲ ಪ್ರಾಂಗಣದಲ್ಲಿ ಉತ್ಸವ ಮೂರ್ತಿಯ ತ್ರಿವಳಿ ಪ್ರದಕ್ಷಿಣೆ ನಡೆಯಿತು. ಮೊದಲ ಪ್ರದಕ್ಷಿಣೆ ವೇಳೆ ರಜತ ಕಿರೀಟ, ಎರಡನೇ ಪ್ರದಕ್ಷಿಣೆ ವೇಳೆ ಸುವರ್ಣ ಕಿರೀಟ, ಮೂರನೇ ಪ್ರದಕ್ಷಿಣೆ ವೇಳೆ ವಜ್ರಸಹಿತ ರತ್ನ ಕಿರೀಟ ಧರಿಸಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.