ADVERTISEMENT

ನಾಮಪತ್ರ ಸಲ್ಲಿಸದ್ದಕ್ಕೆ ಶಂಖ ಊದಿ, ಜಾಗಟೆ ಬಾರಿಸಿ ಸಂಭ್ರಮ!

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 20:20 IST
Last Updated 11 ಡಿಸೆಂಬರ್ 2020, 20:20 IST

ದಾಬಸ್ ಪೇಟೆ: ಪಂಚಾಯಿತಿ ಚುನಾವಣೆಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸದೇ ಇದ್ದರಿಂದ ಪಂಚಾಯಿತಿ ಕಚೇರಿ ಮುಂದೆ ಮುಂದೆ ಶಂಖ ಊದಿ, ಜಾಗಟೆ ಬಾರಿಸಿ ತ್ಯಾಮಗೊಂಡ್ಲು ಪಟ್ಟಣದ ಜನತೆ ಸಂಭ್ರಮಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿತ್ತು. ಡಿ.7ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತಾದರೂ ಯಾರೋಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ.

ತ್ಯಾಮಗೊಂಡ್ಲು ಪಟ್ಟಣ 8 ವಾರ್ಡ್‌ಗಳನ್ನು ಒಳಗೊಂಡಿದ್ದು, 21 ಸದಸ್ಯರಿದ್ದಾರೆ. ಅವರು ಯಾವ ವಾರ್ಡ್‌ನಲ್ಲೂ ನಾಮಪತ್ರ ಸಲ್ಲಿಸಲು ಇಚ್ಚಿಸಲಿಲ್ಲ.

ADVERTISEMENT

’ತ್ಯಾಮಗೊಂಡ್ಲು ಪಟ್ಟಣವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು. ನಮಗೆ ಗ್ರಾಮ ಪಂಚಾಯಿತಿ ಆಡಳಿತ ಬೇಡ‘ ಎಂದು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಪಟ್ಟಣದ ನಾಗರಿಕರು, ಮುಖಂಡರು ಸಭೆ ನಡೆಸಿ ಪಕ್ಷಾತೀತವಾಗಿ ತೀರ್ಮಾನ ಕೈಗೊಂಡಿದ್ದರು.

ಈ ವಿಷಯ ತಿಳಿದ ನೆಲಮಂಗಲ ತಹಶೀಲ್ದಾರ್‌ ಶ್ರೀನಿವಾಸಯ್ಯ ಅವರು ಮುಖಂಡರು ಹಾಗೂ ಸಾರ್ವಜನಿಕರ ಜೊತೆ ಮಾತನಾಡಿ ನಾಮಪತ್ರ ಸಲ್ಲಿಸುವಂತೆ ತಿಳಿಸಿದ್ದರು. ಆದರೆ, ಪಟ್ಟಣದ ಜನ ಇದಕ್ಕೂ ಸೊಪ್ಪು ಹಾಕಲಿಲ್ಲ.ಗುರುವಾರ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಗ್ರಾಮಕ್ಕೆ ಬಂದು ನಾಮಪತ್ರ ಸಲ್ಲಿಸುವಂತೆ ಮನವಿ ಮಾಡಿದರು. ಇದಕ್ಕೂ ಜನರು ಸ್ಪಂದಿಸಲಿಲ್ಲ.

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ವಕೀಲ ವೆಂಕಟೇಶ್ ದೊಡ್ಡೇರಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.