ಆನೇಕಲ್: ಹಿಂದಿನ ದಿನಗಳಲ್ಲಿ ದಲಿತರ ಐಕ್ಯತೆ ಹೋರಾಟಗಾರರ ಉಸಿರಾಗಿತ್ತು. ಆದರೆ ಇಂದು ಉಪಜಾತಿಗಳ ಗುರುತಿಸುವಿಕೆ ಮುನ್ನೆಲೆಗೆ ಬಂದಿದೆ. ಇದರಿಂದಾಗಿ ದಲಿತರ ಐಕ್ಯತೆಗೆ ಧಕ್ಕೆಯಾಗಿದೆ. ಉಪಜಾತಿಗಳು ಮುನ್ನೆಲೆಗೆ ಬಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಂದು ಸಾಹಿತಿ ಕೋಟನಾಗನಹಳ್ಳಿ ರಾಮಯ್ಯ ಹೇಳಿದರು.
ತಾಲ್ಲೂಕಿನ ಚಂದಾಪುರದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ವತಿಯಿಂದ ‘ದಲಿತರ ಐಕ್ಯತೆ ಮತ್ತು ಚಳವಳಿಯ ಮುನ್ನೆಡೆ’ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ದಲಿತರನ್ನು ರಾಜಕೀಯ ಪಕ್ಷಗಳು ಮತಬ್ಯಾಂಕ್ ಮಾಡಿಕೊಂಡಿವೆ. ಆಸೆ ಆಮಿಷಗಳಿಗೆ ಬಲಿಯಾಗದೇ ಸಂವಿಧಾನದ ಆಶಯ ಮತ್ತು ಸಮ ಸಮಾಜ ನಿರ್ಮಾಣಕ್ಕೆ ದಲಿತರು ಒಂದಾಗಬೇಕು. ಸಾಂಸ್ಕೃತಿ ವಿಚಾರ ಧಾರೆಯನ್ನು ಪರಸ್ಪರ ಹಂಚಿಕೊಳ್ಳಲು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಉನ್ನತ ಹುದ್ದೆಗಳಲ್ಲಿ ದಲಿತ ಸಮುದಾಯ ಪ್ರಾತಿನಿಧ್ಯಗಳಿಸಬೇಕಿದೆ. ಈ ನಿಟ್ಟಿನಲ್ಲಿ ದಲಿತ ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯವಾಗಿದೆ ಎಂದು ತಿಳಿಸಿದರು.
ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮೂಲಮಂತ್ರಗಳನ್ನು ಅಂಬೇಡ್ಕರ್ ಅವರು ನೀಡಿದ್ದಾರೆ. ಹಾಗಾಗಿ ಅವರ ತತ್ವ, ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ದಮನಿತ ಸಮುದಾಯ ತಮ್ಮ ಹಕ್ಕುಪಡೆಯಲು ಹೋರಾಟ ನಡೆಸಬೇಕು. ನಮ್ಮ ಹಕ್ಕು ಮತ್ತು ಅಸ್ಮಿತೆಗಾಗಿ ದಲಿತರು ಮತ್ತು ಹಿಂದುಳಿದ ವರ್ಗಗಳ ಸಂಘಟನೆಗಳು ಒಗ್ಗಟ್ಟಾಗಬೇಕು. ಸಮಾಜದ ಪರಿವರ್ತನೆಯಲ್ಲಿ ಹಿಂದುಳಿದವರು ಮತ್ತು ದಲಿತರ ಪಾತ್ರ ಪ್ರಮುಖವಾಗಿದೆ ಎಂದರು.
ಹಂಪೆ ವಿಶ್ವವಿದ್ಯಾಲಯ ನಿವೃತ್ತ ನಿರ್ದೇಶಕ ಸುಜ್ಞಾನ ಮೂರ್ತಿ, ಮುಖಂಡರಾದ ರಾವಣ, ಆನಂದ್ ಚಕ್ರವರ್ತಿ, ನಂದಕುಮಾರ್, ಗೋವಿಂದ್, ತ್ರಿಪುರ ಸುಂದರಿ, ಗುಡ್ಡಹಟ್ಟಿ ಮಂಜುಳ, ಸುರೇಶ್ ಪೋತಾ, ಎಲ್.ನಾರಾಯಣಸ್ವಾಮಿ, ಗೋವಿಂದ್ ಶೆಟ್ಟಿಪಾಳ್ಯ, ಮೂರ್ತಿ, ಮಂಜು, ನಾಗೇಂದ್ರ, ಮುರಳಿ, ನಂಜೇಶ್ ಪ್ರಬುದ್ಧ, ಬಸವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.