ADVERTISEMENT

ರೇಷ್ಮೆಗೂಡಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 14:22 IST
Last Updated 20 ಮಾರ್ಚ್ 2024, 14:22 IST
 ವಿಜಯಪುರದ ರೇಷ್ಮೆಗೂಡು ಮಾರುಕಟ್ಟೆ
 ವಿಜಯಪುರದ ರೇಷ್ಮೆಗೂಡು ಮಾರುಕಟ್ಟೆ   

ವಿಜಯಪುರ (ದೇವನಹಳ್ಳಿ): ತೀವ್ರ ಬರಗಾಲದಲ್ಲಿಯೂ ರೈತರು ಬೆಳೆದ ರೇಷ್ಮೆಗೂಡಿಗೆ ಕನಿಷ್ಠ ₹ 600 ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ಸರ್ಕಾರ ರೈತರಿಗೆ ನೆರವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಒಂದು ಕೆ.ಜಿ.ರೇಷ್ಮೆಗೂಡು ಉತ್ಪಾದನೆ ಮಾಡಲು ಸರಾಸರಿ ₹ 400 ರೂಪಾಯಿ ಖರ್ಚು ಬರುತ್ತಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ, ಇಲ್ಲಿ ಸರಾಸರಿ ₹ 420 ರೂಪಾಯಿ ಒಳಗೆ ಹರಾಜಾಗುತ್ತಿದೆ. ಇದರಿಂದ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಕುಟುಂಬವೆಲ್ಲಾ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಮಗೆ ಕನಿಷ್ಠ ₹ 600 ಬೆಲೆ ಸಿಕ್ಕಿದರೆ ನಮ್ಮ ಶ್ರಮಕ್ಕೆ ತಕ್ಕಂತೆ ಕೂಲಿಯಾದರೂ ಸಿಗುತ್ತದೆ ಎಂದು ರೈತ ಸಿದ್ದಣ್ಣ ಹೇಳುತ್ತಾರೆ.

ಬೇಸಿಗೆಯಲ್ಲಿ ನೀರಿನ ಅಭಾವದಿಂದಾಗಿ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಸಿಗುತ್ತಿಲ್ಲ. ನೀರಾವರಿ ಸೌಲಭ್ಯ ಇರುವ ರೈತರು ಸೊಪ್ಪು ಬೆಳೆದುಕೊಂಡು ರೇಷ್ಮೆಹುಳು ಸಾಕಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಸೊಪ್ಪು ಖರೀದಿ ಮಾಡಿಕೊಂಡು ಬಂದು ರೇಷ್ಮೆಹುಳು ಸಾಕಾಣಿಕೆ ಮಾಡುವ ರೈತರಿಗೆ ಸೊಪ್ಪು ಸಿಗುತ್ತಿಲ್ಲದ ಕಾರಣ, ಹಲವು ರೈತರು ಬೇಸಿಗೆ ಮುಗಿಯುವವರೆಗೂ ಉದ್ಯಮದಿಂದ ದೂರವುಳಿಯುವುದು ಉತ್ತಮ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಇಂತಹ ಸಂಕಷ್ಟದ ನಡುವೆಯೂ ಸೊಪ್ಪು ಖರೀದಿಸಿದರೂ ಉದ್ಯಮವನ್ನು ಉಳಿಸಲು ಪ್ರಯಾಸಪಡುತ್ತಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎನ್ನುತ್ತಾರೆ ರೇಷ್ಮೆ ಬೆಳೆಗಾರರು. 

ADVERTISEMENT

ರೇಷ್ಮೆಗೂಡಿನ ಬೆಲೆ ಮಾರುಕಟ್ಟೆಯಲ್ಲಿ ₹ 400 ರೂಪಾಯಿಗಿಂತಲೂ ಕಡಿಮೆ ಬಂದವರಿಗೆ ಕೆ.ಜಿ.ಗೂಡಿಗೆ ಮಿಶ್ರತಳಿಗೆ ಕನಿಷ್ಠ ₹ 50 ರೂಪಾಯಿ, ದ್ವಿತಳಿ ಗೂಡಿಗೆ ₹ 80 ಪ್ರೋತ್ಸಾಹಧನವನ್ನು ವಿತರಣೆ ಮಾಡಬೇಕು. ಕನಿಷ್ಠ ಬೆಲೆ ₹ 600 ಗೂಡು ಹರಾಜಾಗದಿದ್ದರೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯಿಂದ ಗೂಡು ಖರೀದಿಸಬೇಕು ಎಂದು ರೈತರಾದ ಮುನಿರಾಜು, ಗಂಗಾಧರ್, ಆಂಜಿನಪ್ಪ, ನಾರಾಯಣಸ್ವಾಮಿ, ಒತ್ತಾಯಿಸಿದರು.

ಮೊದಲು ದ್ವಿತಳಿ ಗೂಡಿಗೆ ಕೆ.ಜಿಗೆ ₹ 50 ಪ್ರೋತ್ಸಾಹಧನ, ಮಿಶ್ರತಳಿ ಗೂಡಿಗೆ ₹ 30 ಕೊಡುತ್ತಿದ್ದರು. ನಾವು ಹಲವಾರು ಬಾರಿ ರೇಷ್ಮೆಇಲಾಖೆಯ ಆಯುಕ್ತರಿಗೂ ಮನವಿ ಮಾಡಿದ್ದೇವೆ. ಆದರೂ ಇಲಾಖೆಯವರು ಈ ಬಗ್ಗೆ ಗಮನಹರಿಸುತ್ತಿಲ್ಲ. ರೈತರಿಗೆ ಕೊಡುತ್ತಿದ್ದ ಬಹುತೇಕ ಸೌಲಭ್ಯಗಳನ್ನು ಸರ್ಕಾರ ನಿಲ್ಲಿಸಿದೆ ಎಂದು ರೈತರು ಆರೋಪಿಸಿದರು.

ಸರ್ಕಾರದಿಂದ ಪ್ರೋತ್ಸಾಹಧನ ಕೊಡುತ್ತಿದ್ದ ಯೋಜನೆಯನ್ನು ನಿಲ್ಲಿಸಲಾಗಿದೆ. ಬಹಳಷ್ಟು ರೈತರು ನಮ್ಮ ಇಲಾಖೆಗೆ ಬಂದು ಈಗಲೂ ವಿಚಾರಿಸುತ್ತಾರೆ. ಸರ್ಕಾರ ಬಿಡುಗಡೆ ಮಾಡಿದರೆ ಮಾರುಕಟ್ಟೆಯಲ್ಲಿ ಗೂಡು ಮಾರಾಟ ಮಾಡುವ ರೈತರಿಗೆ ವರ್ಗಾವಣೆ ಮಾಡಲಾಗುತ್ತಿದೆ. ನಾವು ಹಲವು ಬಾರಿ ಪ್ರಸ್ತಾವನೆಗಳು ಕಳುಹಿಸಿಕೊಟ್ಟಿದ್ದೇವೆ ಎಂದು ರೇಷ್ಮೆ ಇಲಾಖೆಯ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.