ADVERTISEMENT

ದೇವನಹಳ್ಳಿ: ವಿಮಾನ ನಿಲ್ದಾಣ; ಮಚ್ಚು ಹಿಡಿದು ಅಟ್ಟಾಡಿಸಿದ ಚಾಲಕ

ಸೈಡ್‌ ಪಿಕ್‌ಪ್‌ ವಿಚಾರಕ್ಕೆ ಗಲಾಟೆ : ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನ। ನಾಲ್ವರ ವಶ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 3:04 IST
Last Updated 18 ನವೆಂಬರ್ 2025, 3:04 IST
ಆರೋಪಿಯಿಂದ ವಶಕ್ಕೆ ಪಡೆಯಲಾದ ಮಾರಕಾಸ್ತ್ರ
ಆರೋಪಿಯಿಂದ ವಶಕ್ಕೆ ಪಡೆಯಲಾದ ಮಾರಕಾಸ್ತ್ರ   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ತಡರಾತ್ರಿ ಪ್ರಯಾಣಿಕರನ್ನು ಕರೆದೊಯ್ಯುವ ವಿಚಾರವಾಗಿ ಟ್ಯಾಕ್ಸಿ ಚಾಲಕರ ನಡುವೆ ಮಾರಾಮಾರಿ ನಡೆದಿದೆ.

ಕೈಯಲ್ಲಿ ಮಚ್ಚು ಹಿಡಿದ ಚಾಲಕನೊಬ್ಬ ಮೂವರು ಚಾಲಕರನ್ನು ವಿಮಾನ ನಿಲ್ದಾಣದ ತುಂಬಾ ಅಟ್ಟಾಡಿಸಿ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಅತ್ಯಂತ ಬಿಗಿ ಭದ್ರತೆ ಹೊಂದಿರುವ ವಿಮಾನ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಹಾಗೂ ಭದ್ರತಾ ಸಿಬ್ಬಂದಿ ಸಮ್ಮುಖದಲ್ಲಿಯೇ ಈ ಸಿನಿಮೀಯ ಘಟನೆ ನಡೆದಿದೆ.

ಟರ್ಮಿನಲ್‌ ಮುಂದೆ ಮಾರಕಾಸ್ತ್ರ ಹಿಡಿದು ಇತರ ಚಾಲಕರನ್ನು ಅಟ್ಟಾಡಿಸಿ ಹಲ್ಲೆಗೆ ಯತ್ನಿಸಿದ ಆರೋಪಿ ಚಾಲಕ ಸೊಹೆಲ್ ಅಹಮ್ಮದ್‌ ಎಂಬಾತನನ್ನು ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್‌) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ.

ADVERTISEMENT

ಎಎಸ್‌ಐ ಸುನೀಲ್‌ ಹಾಗೂ ಸಿಬ್ಬಂದಿ ಇತರ ಮೂವರು ಚಾಲಕರನ್ನು ರಕ್ಷಿಸಿದ್ದಾರೆ. ಹಲ್ಲೆಯಿಂದ ಪಾರಾದ ಜಗದೀಶ್‌, ಸ್ಥಳದಲ್ಲಿದ್ದ ರೇಣು ಕುಮಾರ್‌, ಗಂಗಾಧರ್ ಅಂಗಡಿ ಎಂಬುವರನ್ನು ಸಿಐಎಸ್‌ಎಫ್‌ ಸಿಬ್ಬಂದಿ ವಶಕ್ಕೆ ಪೆಡೆದು ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.

ಘಟನೆಗೆ ಕಾರಣ ಏನು?:

ಬೇರೆಡೆಯಿಂದ ಬಂದಿಳಿಯುವ ಪ್ರಯಾಣಿಕರನ್ನು ಕರೆದೊಯ್ಯುವ (ಸೈಡ್‌ ಪಿಕ್‌ಆಪ್‌) ವಿಚಾರವಾಗಿ ಚಾಲಕರ ನಡುವೆ ಶನಿವಾರ ರಾತ್ರಿ ಜಗಳವಾಗಿತ್ತು. ಇತರರು ಅದನ್ನು ಶಮನಗೊಳಿಸಿದ್ದರು.

ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಸೊಹೆಲ್ ಅಹಮ್ಮದ್, ಮತ್ತೊಬ್ಬ ಚಾಲಕ ಜಗದೀಶ್‌ ಮೇಲೆ ಭಾನುವಾರ ರಾತ್ರಿ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ ಎಂದು ಸಿಐಎಸ್‌ಎಫ್‌ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಏನಿದು ಸೈಡ್‌ ಪಿಕ್‌ ಅಪ್‌?

ವಿಮಾನ ನಿಲ್ದಾಣದ ಟರ್ಮಿನಲ್‌ ಮುಂದೆ ಜಮಾಯಿಸುವ ಕ್ಯಾಬ್‌ ಚಾಲಕರು ಹೊರ ಬರುವ ಪ್ರಯಾಣಿಕರನ್ನು ನೇರವಾಗಿ ಸಂಪರ್ಕಿಸಿ ಕರೆದೊಯ್ಯುತ್ತಾರೆ. ಪ್ರಯಾಣಿಕರು ಆನ್‌ಲೈನ್‌ನಲ್ಲಿ ಮುಂಗಡ ಬುಕಿಂಗ್ ಮಾಡದಿದ್ದರೂ ಸ್ಥಳದಲ್ಲಿಯೇ ಬಾಡಿಗೆ ಹಣ ನಿಗದಿ ಮಾಡಿ ಕರೆದೊಯ್ಯುತ್ತಾರೆ. ಇತರ ಟ್ಯಾಕ್ಸಿಗಳ ಸರದಿ ಸಾಲಿನಲ್ಲಿ ನಿಂತು ಇವರು ತಮ್ಮ ಸರದಿಗಾಗಿ ಕಾಯುವುದಿಲ್ಲ. ಪ್ರಯಾಣಿಕರನ್ನು ನೇರವಾಗಿ ಸಂಪರ್ಕಿಸಿ ಕರೆದೊಯ್ಯುತ್ತಾರೆ. ಇದನ್ನು ಸೈಡ್ ಪಿಕ್‌ ಆಪ್‌ ಎಂದು ಕರೆಯಲಾಗುತ್ತದೆ. ಇದನ್ನು ನಿರ್ಬಂಧಿಸಲಾಗಿತ್ತಾದರೂ ಕೆಲವು ದಿನಗಳಿಂದ ಕೆಎಸ್‌ಟಿಡಿಸಿ ಸಂಸ್ಥೆಯ ಹೆಸರು ಹೇಳಿಕೊಂಡು ಟ್ಯಾಕ್ಸಿ ಚಾಲಕರು ಸೈಡ್ ಪಿಕ್‌ ಆಪ್‌ ಶುರುವಿಟ್ಟುಕೊಂಡಿದ್ದಾರೆ. ಇದು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಪ್ರಯಾಣಿಕರಿಗೂ ತೊಂದರೆಯಾಗುತ್ತದೆ ಎಂದು ಅಲ್ಲಿದ್ದ ಚಾಲಕರು ಆರೋಪಿಸಿದ್ದಾರೆ.

Cಸೈಡ್‌ ಪಿಕ್‌ಅಪ್‌ಗೆ ಅಧಿಕಾರಿಗಳ ಸಾಥ್‌: ಆರೋಪ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಕ್ಯಾಬ್‌ಗಳ 150ಕ್ಕೂ ಹೆಚ್ಚಿನ ಕ್ಯಾಬ್‌ ಚಾಲಕರ ಗುಂಪಿಗೆ ಸೈಡ್‌ ಪಿಕ್‌ಆಪ್‌ ಮಾಡಲು ಅಧಿಕಾರಿಗಳೇ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ. ಸೈಡ್‌ ಪಿಕ್‌ಅಪ್‌ ಮಾಡುವ ಚಾಲಕರು ಪ್ರತಿ ತಿಂಗಳೂ ಪ್ರತಿ ಕ್ಯಾಬ್‌ಗೆ ವಂತಿಗೆ ಸಲ್ಲಿಸುತ್ತಿದ್ದಾರೆ. ಸೈಡ್‌ ಪಿಕ್‌ಆಪ್‌ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರೂ ಏನು ಪ್ರಯೋಜನವಾಗಿಲ್ಲ. ಪೊಲೀಸರು ಹಾಗೂ ಬಿಐಎಎಲ್‌ ಲ್ಯಾಂಡ್‌ ಸ್ಲೈಡ್‌ ಸಿಬ್ಬಂದಿ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಕೆಎಸ್‌ಟಿಡಿಸಿ ಚಾಲಕರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.