ADVERTISEMENT

ದೇವನಹಳ್ಳಿ: ರೈತ ಧರಣಿಗೆ 700 ದಿನ

ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 19:49 IST
Last Updated 4 ಮಾರ್ಚ್ 2024, 19:49 IST
ದೇವನಹಳ್ಳಿ ಚನ್ನರಾಯಪಟ್ಟಣಯ ನಾಡಕಚೇರಿಯ ಮುಂಭಾಗ ಧರಣಿ ಸ್ಥಳದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟಗಾರರು 700ನೇ ದಿನದ ಧರಣಿ ಸಭೆಯಲ್ಲಿ ಭಾಗಿಯಾಗಿದ್ದರು
ದೇವನಹಳ್ಳಿ ಚನ್ನರಾಯಪಟ್ಟಣಯ ನಾಡಕಚೇರಿಯ ಮುಂಭಾಗ ಧರಣಿ ಸ್ಥಳದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟಗಾರರು 700ನೇ ದಿನದ ಧರಣಿ ಸಭೆಯಲ್ಲಿ ಭಾಗಿಯಾಗಿದ್ದರು   

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಸರ್ಕಾರದ ನಿರ್ಧಾರ ವಿರೋಧಿಸಿ ಇಲ್ಲಿನ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ 700 ದಿನ ಪೂರೈಸಿದೆ.

700 ದಿನಗಳಿಂದ ಹೊರಾಟ ನಡೆಸಿ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಆದರೂ ಸರ್ಕಾರದಿಂದ ಸ್ಪಂದನೆ ದೊರೆಯುತ್ತಿಲ್ಲ. ಕೃಷಿ ಭೂಮಿ ಉಳಿಸಲು ಮೀನಮೇಷ ಎಣಿಸುತ್ತಿದೆ. ರೈತರ ಹಿತ ದೃಷ್ಟಿ, ಮುಂದಿನ ಪೀಳಿಗೆಯ ಉಳಿವು ಮತ್ತು ಆಹಾರ ಭದ್ರತೆಗಾಗಿ ಭೂ ಸ್ವಾಧೀನವನ್ನು ಕೂಡಲೇ ಕೈಬಿಡಬೇಕು ಎಂದು ರೈತ ನಲ್ಲಪನಹಳ್ಳಿ ನಂಜಪ್ಪ ಆಗ್ರಹಿಸಿದರು.

ಸಚಿವ ಕೆ.ಎಚ್‌.ಮುನಿಯಪ್ಪ ಅವರು ದಲ್ಲಾಳಿಗಳ ಮಾತಿಗೆ ಮನ್ನಣೆ ನೀಡದೆ ಭೂಸ್ವಾಧೀನ ಕೈ ಬಿಟ್ಟು ರೈತರ ಹಿತ ಕಾಪಾಡಬೇಕು. ಈ ಭಾಗದ ರೈತರು ಕೃಷಿ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅವರ ನೆಮ್ಮದಿ ಜೀವನಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಕೃಷಿಯನ್ನೇ ನಮ್ಮ ಜೀವನವಾಗಿದೆ. ಶೇ 80ಕ್ಕೂ ಹೆಚ್ಚು ಜನರು ಭೂಮಿ ನೀಡಲು ಸಿದ್ಧರಿಲ್ಲ. ಕೆಲವು ದಳ್ಳಾಳಿಗಳು ಅಪಪ್ರಚಾರ ಮಾಡುತ್ತಾ ರೈತರ ನೆಮ್ಮದಿ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ ಕೆಲವು ದಿನಗಳು ಕಾದು ನಮ್ಮ ದಾರಿಯನ್ನು ನಾವು ನೋಡಿಕೊಳ್ಳುತ್ತೇವೆ. ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ’ ಎಂದು ಅಶ್ವತಪ್ಪ ಎಚ್ಚರಿಸಿದರು.

ವೆಂಕಟೇಶ್, ಸೋಣ್ಣೇಗೌಡ, ಸೀನಪ್ಪ, ನಂಜೇಗೌಡ, ಮೋಹನ್, ನಾರಾಯಣಸ್ವಾಮಿ, ಮುನಿರಾಜು, ಮುನಿಕೃಷ್ಣ, ಪಿಳ್ಳಪ್ಪ ಹಾಜರಿದ್ದರು.

‘ಕೊಟ್ಟ ಮಾತಿನಂತೆ ನಡೆದುಕೊಳ್ಳಿ’

ಚನ್ನರಾಯಪಟ್ಟಣ ಗ್ರಾ.ಪಂ ಅಧ್ಯಕ್ಷ ಮಾರೇಗೌಡ ಮಾತನಾಡಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ಮಾಡಿ ಕೂಡಲೇ ಭೂ ಸ್ವಾಧೀನವನ್ನು ಕೈಬಿಡಲು ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ಹೋರಾಟಕ್ಕೆ ಸಿದ್ಧರಾಗುತ್ತೇವೆ. ಬಹುತೇಖ ರೈತರು ಭೂಮಿ ನೀಡಲು ಸಿದ್ಧರಿಲ್ಲ ಕೆ.ಎಚ್. ಮುನಿಯಪ್ಪ ಅವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.