ದೇವನಹಳ್ಳಿ: ತಾಲ್ಲೂಕಿನ ಬೂದಿಗೆರೆ ಗ್ರಾಮದ ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಭಿವೃದ್ಧಿ ಮಾಡುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿ ಕಳೆದ 8 ವರ್ಷಗಳಿಂದ ಕಾಮಗಾರಿ ಪೂರ್ಣಗೊಳಿಸದೆ ಇರುವುದನ್ನು ವಿರೋಧಿಸಿ ಸ್ಥಳೀಯರು ಅಯ್ಯಪ್ಪ ಸ್ವಾಮಿ ವೃತ್ತದಲ್ಲಿ ಗುರುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕೆ.ಆರ್.ಪುರಂ, ಬೂದಿಗೆರೆ ಮಾರ್ಗವಾಗಿ ವಿಮಾನ ನಿಲ್ದಾಣ, ದೇವನಹಳ್ಳಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಸಂಸ್ಥೆಯೂ ಕಾಮಗಾರಿ ಪ್ರಾರಂಭಿಸಿ ಎಂಟು ವರ್ಷವಾದರು ಇನ್ನೂ ಪೂರ್ಣಗೊಳಿಸಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ರಸ್ತೆಯಲ್ಲೆಲ್ಲಾ ಗುಂಡಿಗಳು ಬಿದಿದ್ದು, ದಿನ ನಿತ್ಯ ಹತ್ತಾರು ಜನ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕಿಡಾಗಿ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯ ಕಾಮಗಾರಿ ಪೂರ್ಣ ಮಾಡಿ ಸುಸಜ್ಜಿತ ರಸ್ತೆ ನಿರ್ಮಿಸುವವರೆಗೂ ರಸ್ತೆ ತಡೆದು ಪ್ರತಿಭಟಿಸುತ್ತೇವೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು.
ಈಗಾಗಲೇ ಸಾಕಷ್ಟು ಬಾರಿ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಕೆಆರ್‌ಡಿಸಿಎಲ್ ಸಂಸ್ಥೆ ಅವರು 2023ರಲ್ಲಿ ಬಂದು ಮೂರು ತಿಂಗಳಲ್ಲಿ ರಸ್ತೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದವರೂ ಬರಲೇ ಇಲ್ಲ. ಅವರು ಸ್ಥಳಕ್ಕೆ ಬಂದರಷ್ಟೇ ರಸ್ತೆಯನ್ನು ಸಂಚಾರ ಮುಕ್ತಗೊಳ್ಳಿಸುತ್ತೇವೆ ಎಂದು ಸಾರ್ವಜನಿಕರು ಪಟ್ಟು ಹಿಡಿದರು.
ಸ್ಥಳೀಯರಾದ ಮೂರ್ತಿ,ಶ್ರೀನಿವಾಸ್ ಗೌಡ, ಬನ್ನಿಮಂಗಳ ಜಗದೀಶ್, ಶ್ರೀನಾಥ್ ಗೌಡ, ಎಸ ಟಿ ಡಿ ರಮೇಶ್, ಅಶ್ವಥ್, ಗ್ರಾಮ ಪಂಚಾಯತಿ ಸದಸ್ಯ ಶ್ರೀನಿವಾಸ್, ನಾರಾಯಣಸ್ವಾಮಿ ಬಿಜೆಪಿ ಮುಖಂಡ ಜೆಸಿಬಿ ಬಾಬು, ಮಂಜುನಾಥ್ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.
ಚನ್ನರಾಯಪಟ್ಟಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಲು ಅನುಮತಿ ನೀಡಿರುವುದು ಯಾರು? ಇದಿರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕೂಡಲೇ ಪ್ರತಿಭಟನೆ ಕೈಬಿಟ್ಟು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಎಂದು ಮನವಿ ಮಾಡಿದಿರು. ಮಧ್ಯಾಹ್ನದ ನಂತರ ಸಂಪೂರ್ಣ ರಸ್ತೆ ಬಂದ್ ಆಗಿದ್ದರಿಂದ ಈ ರಸ್ತೆಯ ಉದ್ದಕ್ಕೂ ವಾಹನ ನಿಂತು ಸುಗಮ ಸಂಚಾರಕ್ಕೆ ಅಡೆತಡೆಯಾಯಿತು. 6 ಗಂಟೆಗಳ ಕಾಲ ರಸ್ತೆಯಲ್ಲಿಯೇ ಸರತಿ ಸಾಲಿನಲ್ಲಿ ಕಾರುಗಳು ನಿಂತಿದ್ದವು. ವಿಮಾನ ನಿಲ್ದಾಣಕ್ಕೆ ತೆರಳಲು ತಡವಾಗುತ್ತಿದೆ ದಯವಿಟ್ಟು ದಾರಿ ಬಿಡಿ ಎಂದು ದೂರದೂರುಗಳಿಗೆ ಹೋಗಲು ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಪೊಲೀಸರಲ್ಲಿ ಕೇಳಿಕೊಂಡರು.
15 ದಿನದೊಳಗೆ ಕಾಮಗಾರಿ ಪೂರ್ಣ: ಕೆಆರ್‌ಡಿಸಿಎಲ್ ಎಂಡಿ
ಬೂದಿಗೆರೆ ಗ್ರಾಮದ ಅಯ್ಯಪ್ಪ ಸ್ವಾಮಿ ವೃತ್ತಕ್ಕೆ ಬಂದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಎನ್. ಸುಶೀಲಮ್ಮ ಹಾಗೂ ಎಂಜಿನಿಯರ್ ಕವಿತಾ ರಸ್ತೆ ತಡೆ ಮಾಡದಂತೆ ಪ್ರತಿಭಟನಾನಿರತರಲ್ಲಿ ಮನವಿ ಮಾಡಿದರು. ಗ್ರಾಮಸ್ಥರೊಂದಿಗೆ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಸಾಗಿ ಸ್ಥಳೀಯವಾಗಿ ಉಂಟಾಗುತ್ತಿರುವ ಸಮಸ್ಯೆ ಆಲಿಸಿದರು. ಮುಂದಿನ 15 ದಿನಗಳ ಒಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಹಾಗೂ ಕೆಆರ್‌ಡಿಸಿಎಲ್ ಸಂಸ್ಥೆಯ ವತಿಯಿಂದ ಕ್ಯಾಂಪ್ ನಡೆಸಿ ಎಲ್ಲರ ಸಮಸ್ಯೆ ಕೇಳಿ ಸೂಕ್ತ ಪರಿಹಾರ ಮಾಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದಾದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಗುಂಡಿ ಮುಕ್ತ ರಸ್ತೆ ನೀಡಿ ಪ್ರಾಣ ಉಳಿಸಿ
ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಬೂದಿಗೆರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಹಾಳು ಮಾಡಿದ್ದಾರೆ. ದಿನ ನಿತ್ಯದ ಕೆಲಸಕ್ಕೆ ಓಡಾಡಲು ಆಗದಂತಹ ದುಸ್ಥಿತಿ ಎದುರಾಗಿದೆ. ವೈಟ್‌ಫೀಲ್ಡ್ ಭಾಗದಿಂದ ನಿತ್ಯ ಸಾವಿರಾರು ಕ್ಯಾಬ್‌ಗಳು ಇದೇ ಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತದೆ. ಒಬ್ಬರಲ್ಲ ಒಬ್ಬರು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುವ ಭಯದಲ್ಲಿದ್ದು ರಸ್ತೆ ಕಾಮಗಾರಿ ಪೂರ್ಣವಾಗುವವರೆಗೂ ರಸ್ತೆ ಬಂದ್ ಮಾಡಿ ಪ್ರಾಣ ಉಳಿಸಿ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.