ADVERTISEMENT

ದೇವನಹಳ್ಳಿ | ಬೊಮ್ಮಾವಾರ ಕಲ್ಯಾಣಿಯಲ್ಲಿ ದೀಪೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:41 IST
Last Updated 17 ಫೆಬ್ರುವರಿ 2026, 4:41 IST
ದೇವನಹಳ್ಳಿ ತಾಲ್ಲೂಕಿನ ಬೊಮ್ಮಾವಾರ ಗ್ರಾಮದ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಕಲ್ಯಾಣಿ ಸುತ್ತ ಸಾವಿರಾರು ಹಣತೆಗಳ ಹಚ್ಚಿ ಶಿವರಾತ್ರಿ ಆಚರಿಸಲಾಯಿತು.
ದೇವನಹಳ್ಳಿ ತಾಲ್ಲೂಕಿನ ಬೊಮ್ಮಾವಾರ ಗ್ರಾಮದ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಕಲ್ಯಾಣಿ ಸುತ್ತ ಸಾವಿರಾರು ಹಣತೆಗಳ ಹಚ್ಚಿ ಶಿವರಾತ್ರಿ ಆಚರಿಸಲಾಯಿತು.   

ದೇವನಹಳ್ಳಿ: ತಾಲ್ಲೂಕಿನ ಬೊಮ್ಮಾವಾರ ಗ್ರಾಮದ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಪುನಶ್ಚೇತನಗೊಂಡ ಕಲ್ಯಾಣಿಯಲ್ಲಿ ಶಿವರಾತ್ರಿಯ ಅಂಗವಾಗಿ ಭಾನುವಾರ ಗಂಗಾ ಪೂಜೆ ಆಯೋಜಿಸಲಾಗಿತ್ತು.

ಕಲ್ಯಾಣಿ ಸುತ್ತ ಸಾವಿರಾರು ಹಣತೆಗಳನ್ನು ಬೆಳಗಿಸಿ ದೀಪೋತ್ಸವ ನಡೆಸಲಾಯಿತು. ಎರಡು ನೂರಕ್ಕೂ ಹೆಚ್ಚು ಮಹಿಳೆಯರು ಗಂಗಾ ಕಲಶಗಳೊಂದಿಗೆ ಶೋಭಾಯಾತ್ರೆ ನಡೆಸಿದರು.

ಪರಿಸರ ಸಂರಕ್ಷಣ ತಂಡದ ಸದಸ್ಯರು ಸ್ಥಳೀಯರ ಸಹಕಾರದೊಂದಿಗೆ 12 ವಾರ ದೇವಸ್ಥಾನದ ಕಲ್ಯಾಣಿ ಸ್ವಚ್ಛತೆ ಹಾಗೂ ಪುನಶ್ಚೇತನ ಕಾರ್ಯ ಕೈಗೊಂಡಿತ್ತು. ಇದೇ ವೇಳೆ ಪರಿಸರ ಸಂರಕ್ಷಣೆ ಕುರಿತು ಎಲ್ಲರಿಗೂ ಸಂಕಲ್ಪ ಮಾಡಿಸಲಾಯಿತು.

ADVERTISEMENT

‘ನಮ್ಮ ಸುತ್ತಮುತ್ತ ಇರುವ ಪ್ರತಿಯೊಂದು ಕೆರೆ–ಕಲ್ಯಾಣಿಗಳು ಗಂಗೆಯಷ್ಟೇ ಪವಿತ್ರ. ಸ್ಥಳೀಯ ಜಲಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ನೈಜ ಕಾಳಜಿ ವಹಿಸಿದಾಗ ಮಾತ್ರ ಗಂಗಾ ಪೂಜೆಗೆ ಸಾರ್ಥಕತೆ ದೊರೆಯುತ್ತದೆ’ ಎಂದು ಪರಿಸರ ಸಂರಕ್ಷಣ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ವೆಂಕಟೇಶ ಸಂಗನಾಳ ಹೇಳಿದರು.

ಪ್ರತಿ ಮನೆ ಪರಿಸರ ಸ್ನೇಹಿಯಾಗಬೇಕು. ಜಲ ಸಂರಕ್ಷಣೆ, ವೃಕ್ಷ ಸಂರಕ್ಷಣೆ–ಸಂವರ್ಧನೆ ಮತ್ತು ಪಾಲಿಥಿನ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಲ್ಲಿಸುವ ಮೂಲಕ ಗ್ರಾಮವನ್ನೇ ಸಂಪೂರ್ಣ ಪರಿಸರ ಸ್ನೇಹಿ ಗ್ರಾಮವನ್ನಾಗಿ ರೂಪಿಸಬೇಕು ಎಂದರು.

ಪ್ರಸಾದ ವಿತರಣೆ ಸೇರಿದಂತೆ ಸಮಗ್ರ ಕಾರ್ಯಕ್ರಮವನ್ನು ಪರಿಸರ ಸ್ನೇಹಿಯಾಗಿ ನಡೆಸಲು ವಿಶೇಷ ಮುತುವರ್ಜಿ ವಹಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯರು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದ ಮಠಾಧೀಶರು ಮತ್ತು ಗಣ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.