
ದೇವನಹಳ್ಳಿ: ವೇಗವಾಗಿ ನಗರೀಕರಣದತ್ತ ಸಾಗುತ್ತಿರುವ ದೇವನಹಳ್ಳಿಗೆ ಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆ ಸ್ಥಳೀಯರಲ್ಲಿ ಹೆಚ್ಚಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಸಾರಿಗೆ, ನ್ಯಾಯಾಂಗ ಹಾಗೂ ಪೊಲೀಸ್ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ ಎಂಬುದು ವಿವಿಧ ವಲಯಗಳ ಪ್ರಮುಖ ಬೇಡಿಕೆಯಾಗಿದೆ.
ದೇವನಹಳ್ಳಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಿ ಮಧ್ಯಮ ವರ್ಗದವರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪಟ್ಟಣ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಸಮರೋಪಾದಿಯಲ್ಲಿ ಉತ್ತಮ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ ಜನತಾ ಬಜಾರ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನೀಡಬೇಕೆಂಬ ಆಗ್ರಹವೂ ಕೇಳಿಬಂದಿದೆ.
ನಗರೀಕರಣದ ಪರಿಣಾಮ ದೇವನಹಳ್ಳಿ ಭಾಗದ ಕೆರೆಗಳು ಕಲುಷಿತಗೊಳ್ಳುತ್ತಿದ್ದು, ಕಾಲುವೆಗಳ ಒತ್ತುವರಿಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಸಂಸ್ಕರಿತ ನೀರಿನ ಹರಿವು ಹಾಗೂ ಅಂತರ್ಜಲ ಮಾಲಿನ್ಯ ಸ್ಥಳೀಯರ ಆರೋಗ್ಯಕ್ಕೂ ಅಪಾಯ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಗೆ ವಿಶೇಷ ಅನುದಾನ ಮೀಸಲಿಡಬೇಕು.
ಪಟ್ಟಣದಿಂದ ಪ್ರತಿದಿನ ಸಾವಿರಾರು ಜನರು ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಸ್‌ಗಳ ಮೂಲಕ ಸಂಚರಿಸುತ್ತಿದ್ದರೂ, ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣದ ಕೊರತೆ ತೀವ್ರವಾಗಿ ಕಾಡುತ್ತಿದೆ. ಮಳೆ, ಚಳಿ ಹಾಗೂ ಬಿಸಿಲಿನ ನಡುವೆ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿರುವುದರಿಂದ ಆಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜಿಲ್ಲೆಯ ಕೇಂದ್ರವಾಗಿರುವ ದೇವನಹಳ್ಳಿಯಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಅನುಮೋದನೆ ದೊರೆತಿದ್ದರೂ, ಪ್ರಮುಖ ನ್ಯಾಯಾಲಯಗಳು ಇನ್ನೂ ಬೆಂಗಳೂರಲ್ಲೇ ಕಾರ್ಯನಿರ್ವಹಿಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ನ್ಯಾಯಾಲಯಗಳನ್ನು ದೇವನಹಳ್ಳಿಗೆ ಸ್ಥಳಾಂತರಿಸಿ, ಸಮರ್ಪಕ ಮೂಲಸೌಕರ್ಯ ಹೊಂದಿದ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ರಿಯಲ್ ಎಸ್ಟೇಟ್ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ಸರ್ಕಾರಿ ಜಾಗಗಳ ಅಕ್ರಮ ಕಬಳಿಕೆ ಪ್ರಕರಣಗಳು ಏರಿಕೆಯಾಗುತ್ತಿವೆ ಎನ್ನಲಾಗಿದೆ. ಭೂ ಕಬಳಿಕೆ ನಿಯಂತ್ರಣಕ್ಕೆ ವಿಶೇಷ ದಳ ರಚಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಒಟ್ಟಾರೆ, ರಾಜ್ಯ ಬಜೆಟ್‌ನಲ್ಲಿ ದೇವನಹಳ್ಳಿಯ ಸಮಗ್ರ ಅಭಿವೃದ್ಧಿಗೆ ಸ್ಪಷ್ಟ ನೀತಿ ಮತ್ತು ಸಾಕಷ್ಟು ಅನುದಾನ ಘೋಷಣೆ ಮಾಡುವ ನಿರೀಕ್ಷೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ದೇವನಹಳ್ಳಿಯ ನಲ್ಲೂರು ಹುಣಸೆ ತೋಪಿನಲ್ಲಿರುವ ಚೋಳರು ನಿರ್ಮಿಸಿದ ಚನ್ನಕೇಶವ ದೇಗುಲ
ಎಸ್.ಪಿ ಕಚೇರಿ ಸ್ಥಳಾಂತರಕ್ಕೆ ಒತ್ತಾಯ
ಅಭಿವೃದ್ಧಿಯೊಂದಿಗೆ ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಸ್ಥಳೀಯರು ಸೂಚಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯನ್ನು ದೇವನಹಳ್ಳಿಗೆ ಸ್ಥಳಾಂತರಿಸುವುದರ ಜೊತೆಗೆ ಪೊಲೀಸ್ ಸಿಬ್ಬಂದಿಗೆ ವಸತಿ ಸಂಕೀರ್ಣ ನಿರ್ಮಾಣಕ್ಕೂ ಅನುದಾನ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಸ್ಮಾರಕ ಐತಿಹಾಸಿಕ ಕುರುವು ರಕ್ಷಣೆ
ಇದಲ್ಲದೆ ತಾಲ್ಲೂಕಿನ ಸ್ಮಾರಕಗಳು ಕೋಟೆಗಳು ಶಾಸನಗಳು ಹಾಗೂ ಪೌರಾಣಿಕ ದೇಗುಲಗಳ ಸಂರಕ್ಷಣೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಬೇಡಿಕೆಯೂ ಮುಂದಿಟ್ಟಲಾಗಿದೆ. ಐತಿಹಾಸಿಕ ಮಹತ್ವ ಹೊಂದಿರುವ ಪ್ರದೇಶಗಳನ್ನು ಸಂರಕ್ಷಿಸಿ ಉದ್ದೇಶಿತ ಅಭಿವೃದ್ಧಿ ಯೋಜನೆಗಳಿಂದ ಸ್ಥಳೀಯ ಗ್ರಾಮಗಳಿಗೆ ತೊಂದರೆಯಾಗದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಮನವಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.