ADVERTISEMENT

ದೇವನಹಳ್ಳಿ: ಪ್ರಯಾಣಿಕರ ಬಳಕೆಗೆ ಬಾರದ ತಂಗುದಾಣ

ಬಹುತೇಕ ಬಸ್ ತಂಗುದಾಣಗಳಲ್ಲಿ ನಿರ್ವಹಣೆ ಕೊರತೆ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 20 ಜುಲೈ 2025, 2:28 IST
Last Updated 20 ಜುಲೈ 2025, 2:28 IST
ವಿಜಯಪುರ ಶಿಡ್ಲಘಟ್ಟ ಕ್ರಾಸ್ ಬಳಿ ಇರುವ ಬಸ್ ತಂಗುದಾಣ 
ವಿಜಯಪುರ ಶಿಡ್ಲಘಟ್ಟ ಕ್ರಾಸ್ ಬಳಿ ಇರುವ ಬಸ್ ತಂಗುದಾಣ    

ವಿಜಯಪುರ (ದೇವನಹಳ್ಳಿ): ಪಟ್ಟಣದ ವಿವಿಧ ಕಡೆ ನಿರ್ಮಿಸಿರುವ ಬಸ್ ತಂಗುದಾಣಗಳು ಪ್ರಯಾಣಿಕರಿಗೆ ಬಳಕೆಯಾಗುತ್ತಿಲ್ಲ. ಸಮರ್ಪಕ ನಿರ್ವಹಣೆಯಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಪ್ರಯಾಣಿಕರಿಗೆ ಹಾಗೂ ಪಾದಚಾರಿಗಳಿಗೆ ಅನುಕೂಲವಾಗಲಿ, ಬಿಸಿಲು-ಮಳೆಯಲ್ಲಿ ಬಸ್‌ಗಾಗಿ ಕಾಯುವವರಿಗೆ ರಕ್ಷಣೆ ಸಿಗಲಿ ಎನ್ನುವ ಸದುದ್ದೇಶದಿಂದ ಸರ್ಕಾರ ಲಕ್ಷಾಂತರ ವೆಚ್ಚದಿಂದ ಪಟ್ಟಣದ ಹಲವೆಡೆ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಈ ತಂಗುದಾಣಗಳು ಪ್ರಯಾಣಿಕರಿಗೆ ಬಳಕೆಯಾಗದೆ ದೂರವಾಗಿದೆ.

ಈ ಹಿಂದೆ ಕ್ಷೇತ್ರದ ಸಂಸದರಾಗಿದ್ದ ವೀರಪ್ಪ ಮೊಯಿಲಿ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಬಹುತೇಕ ಬಸ್ ತಂಗುದಾಣಗಳು ನಿರ್ವಹಣೆ ಕೊರತೆ ಎದುರಾಗಿದೆ. ನಾಮಫಲಕ, ಆಸನಗಳು ಹಾನಿಗೊಂಡಿವೆ. ಗಿಡ-ಗಂಟಿಗಳು, ತ್ಯಾಜ್ಯದಿಂದ ತಂಗುದಾಣಗಳು ಆಧ್ವಾನಗೊಂಡಿವೆ.

ADVERTISEMENT

ಬಸ್ ತಂಗುದಾಣ ಇರುವ ಸ್ಥಳಗಳಲ್ಲಿ ಚಾಲಕರು ಬಸ್‍ಗಳನ್ನು ನಿಲ್ಲಿಸುತ್ತಿಲ್ಲ. ಸದ್ಯ ಈಗಿರುವ ಬಸ್ ತಂಗುದಾಣಗಳು ಬೀಡಿ, ಸಿಗರೇಟ್, ತಂಬಾಕು ಸವಿಯಲು, ಕುಡುಕರ ತಾಣವಾಗಿ, ಪೋಸ್ಟರ್‌ ಅಂಟಿಸಲು ಬಳಕೆಯಾಗುತ್ತಿವೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಚಾಲಕರು ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವ ಪ್ರವೃತ್ತಿ ಹೆಚ್ಚಾಗಿದೆ.

ಚಾಲಕರು ಸಂಚಾರ ನಿಯಮ ಉಲ್ಲಂಘಿಸಿ ತಂಗುದಾಣದ ಹಿಂದೆ ಮುಂದೆ ಬಸ್‍ಗಳನ್ನು ನಿಲ್ಲಿಸುವುದರಿಂದ ವಾಹನ ಸವಾರರು, ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ಶಾಲಾ-ಕಾಲೇಜುಗಳು ಆರಂಭ ಹಾಗೂ ಬಿಡುವಿನ ವೇಳೆಯಲ್ಲಿ ಈ ರಸ್ತೆ ಮೇಲೆಯೇ ಆತುರವಾಗಿ ವಿದ್ಯಾರ್ಥಿಗಳು ಬಸ್ ಹಿಡಿಯುವಂತಾಗಿದೆ. ಸುಗಮ ಸಂಚಾರ ದೂರವಾಗಿದೆ. ಪೊಲೀಸರು, ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ದಿನೆದಿನೇ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ಅಡ್ಡ ದಿಡ್ಡಿಯಾಗಿ ವಾಹನ ನಿಲ್ಲಿಸುವುದು ಸಾಮಾನ್ಯವಾಗಿದೆ. ಕಿರಿದಾದ ರಸ್ತೆಗಳಲ್ಲಿ ಸರಕು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಇನ್ನಾದರೂ ಪಟ್ಟಣದಲ್ಲಿ ಸಂಚಾರ ಸಮಸ್ಯೆ ಬಗೆಹರಿಸುವಂತೆ ಪೊಲೀಸರು ಕ್ರಮಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

ಪುರಸಭೆ ಬಳಿ ಇರುವ ಬಸ್ ತಂಗುದಾಣ 
ದೇವನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಬಸ್ ತಂಗುದಾಣ 
ಬಸ್ ತಂಗುದಾಣಗಳ ನಿರ್ವಹಣೆ ಇಲ್ಲವಾಗಿದೆ. ಚಾಲಕರು ಎಲ್ಲೆಂದರಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಸಾಮಾನ್ಯವಾಗಿದೆ. ಪ್ರಯಾಣಿಕರು ತೊಂದರೆ ಪಡುವಂತಾಗಿದೆ
ಪ್ರದೀಪ್ ಪ್ರಯಾಣಿಕ
ಬಸ್ ತಂಗುದಾಣದಲ್ಲಿ ಕುಡುಕರು ಮಲಗುವ ಸ್ಥಳವಾಗಿ ಮಾರ್ಪಟ್ಟಿದೆ. ಸ್ವಚ್ಛತೆ ಮರೀಚಿಕೆಯಾಗಿದೆ. ನಿರ್ವಹಣೆ ಕೊರತೆಯಿಂದ ತಂಗುದಾಣ ಅನಾಥಗೊಂಡಿದೆ
ಮಾಣಿಕ್ಯ ವಿದ್ಯಾರ್ಥಿ

ಬಳಕೆಗೆ ಬಾರದ ತಂಗುದಾಣ:

ಪಟ್ಟಣದಲ್ಲಿ ಅಗತ್ಯ ಇರುವ ಕಡೆ ಬಸ್ ತಂಗುದಾಣ ನಿರ್ಮಿಸಿದರೂ ಅದು ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲ. ಪಟ್ಟಣದ ಟೌನ್ ಹಾಲ್ ಬಳಿ ಇರುವ ಬಸ್ ತಂಗುದಾಣ ದೊಡ್ಡ ಮೋರಿ ಬಳಿ ಇರುವ ತಂಗುದಾಣ ಚಿಕ್ಕಬಳ್ಳಾಪುರ ಕಡೆಗೆ ಹೋಗುವ ರಸ್ತೆಯಲ್ಲಿರುವ ಬಸ್ ತಂಗುದಾಣ ಇದ್ದರೂ ಇವುಗಳ ನಿರ್ವಹಣೆ ಕೊರತೆ ಉಂಟಾಗಿದೆ. ಕೋಲಾರ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಾಣವಾಗದಿರುವುದು ಪ್ರಯಾಣಿಕರಿಗೆ ತೊಂದರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.