ADVERTISEMENT

ಪ್ರಧಾನಿ ಆಗಮನಕ್ಕೆ ದೇವನಹಳ್ಳಿ ಸಿಂಗಾರ

11ಕ್ಕೆ ಕೆಂಪೇಗೌಡರ ಪ್ರತಿಮೆ ಅನಾವರಣ: ಬಿಗಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 6:57 IST
Last Updated 8 ನವೆಂಬರ್ 2022, 6:57 IST
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಯನ್ನು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪರಿಶೀಲಿಸಿದರು. ಜಿಲ್ಲಾಧಿಕಾರಿ ಆರ್‌. ಲತಾ ಇದ್ದರು
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಯನ್ನು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪರಿಶೀಲಿಸಿದರು. ಜಿಲ್ಲಾಧಿಕಾರಿ ಆರ್‌. ಲತಾ ಇದ್ದರು   

ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ನ. 11ರಂದು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಾಣಗೊಂಡಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಹಾಗೂ ವಿಮಾನ ನಿಲ್ದಾಣದ ಟರ್ಮಿನಲ್‌ 2 ಅನ್ನು ಲೋಕಾರ್ಪಣೆ ಮಾಡಲು ಆಗಮಿಸುತ್ತಿರುವ ಬೆನ್ನಲ್ಲೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೊಂದಿಕೊಂಡಿರುವ ಪ್ರದೇಶವೂ ಶೃಂಗಾರಗೊಳ್ಳುತ್ತಿದೆ.

ಕನ್ನಮಂಗಲ ಪಾಳ್ಯದಿಂದ ಭುವನಹಳ್ಳಿ ಮಾರ್ಗದಲ್ಲಿರುವ ಸಿಗ್ನೆಚರ್ ಪಾರ್ಕ್‌ನಲ್ಲಿ ವೇದಿಕೆ ಸಿದ್ಧತೆಗೊಳ್ಳುತ್ತಿದೆ. ಈ ವೇದಿಕೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಿಸ್ತರಣೆ ಮಾಡುತ್ತಿರುವ ಜಿಲ್ಲಾಡಳಿತವು ರಸ್ತೆಯ ಅಕ್ಕಪಕ್ಕದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ವೇದಿಕೆ ನಿರ್ಮಾಣಕ್ಕೆ ಕೆಲ ರೈತರ ಜಮೀನನ್ನು ಉಪಯೋಗಿಸಿಕೊಂಡಿದ್ದು, ಬೆಳೆ ನಷ್ಟ ಭರಿಸುವ ಭರವಸೆಯನ್ನು ಕಂದಾಯ ಇಲಾಖೆ ನೀಡಿದೆ ಎಂದು ತಿಳಿದುಬಂದಿದೆ.

ಕೋಲಾರ, ಹೊಸಕೋಟೆ ಮಾರ್ಗವಾಗಿ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ದೇವನಹಳ್ಳಿ ಪಟ್ಟಣದಿಂದ ಅಣ್ಣೇಶ್ವರ ಗ್ರಾ.ಪಂ. ಮಾರ್ಗವಾಗಿ ಕಾರ್ಗೋ ರಸ್ತೆಗಳನ್ನು ಸಹ ರಿಪೇರಿ ಮಾಡಲಾಗುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ರಸ್ತೆ ವಿಸ್ತರಣೆಯನ್ನೂ ಮಾಡಲಾಗುತ್ತಿದೆ.

ADVERTISEMENT

ಸಚಿವರಾದ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಆರ್‌. ಅಶೋಕ, ಡಾ.ಕೆ. ಸುಧಾಕರ್‌ ವಾಹನಗಳ ಸಂಚಾರ ವಿಚಾರವಾಗಿ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಾರ್ಯಕ್ರಮದ ಬಂದೋಬಸ್ತ್‌ಗಾಗಿ 5,000 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈ ಪೈಕಿ 1,500 ಸಿಬ್ಬಂದಿಯನ್ನು ಸಂಚಾರ ನಿಯಂತ್ರಣಕ್ಕೆ ಮೀಸಲಿಡಲಾಗಿದೆ. ಏರ್‌ಪೋರ್ಟ್‌ ಮಾರ್ಗವಾಗಿ ಬೇಗೂರು, ಮುತ್ತುಗದಹಳ್ಳಿ, ಶೆಟ್ಟಿಗೆರೆ, ದೊಡ್ಡಜಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನ. 10 ಹಾಗೂ 11ರಂದು ಪೂರ್ಣ ಪ್ರಮಾಣದಲ್ಲಿ ಬಂದ್ ಮಾಡುವ ಸಾಧ್ಯತೆಗಳಿವೆ.

ಸಚಿವರಿಂದ ಪರಿಶೀಲನೆ:ಸಾರ್ವಜನಿಕ ಸಭೆಯ ಸಿದ್ಧತೆಯನ್ನು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪರಿಶೀಲಿಸಿದರು. ಆದಷ್ಟು ಬೇಗ ಕೊನೆಯ ಹಂತದ ಕೆಲಸವನ್ನು ಪೂರ್ಣಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಸೂಕ್ತ ಸಲಹೆ ನೀಡಿದರು.

ಭದ್ರತೆ ಸೇರಿದಂತೆ ಯಾವುದರಲ್ಲೂ ಕಿಂಚಿತ್ತು ಲೋಪಕ್ಕೆ ಆಸ್ಪದ ಕೊಡಬಾರದು. ಪಾರ್ಕಿಂಗ್, ಊಟ, ತಪಾಸಣೆ ಇತ್ಯಾದಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.