
ದೇವನಹಳ್ಳಿ: ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಕೋಟೆ ಕ್ರಾಸ್ (ಅಕ್ಕುಪೇಟೆ ಜಂಕ್ಷನ್) ಅಪಘಾತ ಸ್ಥಳವಾಗಿ ಪರಿಣಮಿಸಿದ್ದು, ವಾಹನ ಸವಾರರ ಜೀವಕ್ಕೆ ಸಂಚಾಕಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ.
ಇತ್ತೀಚೆಗೆ ನಡೆದ ಡಾಂಬರೀಕರಣ ಕಾಮಗಾರಿಯಿಂದ ರಸ್ತೆ ಮೇಲ್ಮೈ ಮಟ್ಟ ಬದಲಾಗಿದ್ದು, ಇದರ ಪರಿಣಾಮ ಈಗಿರುವ ಸ್ಪೀಡ್ ಬ್ರೇಕರ್‌ಗಳು ಭಾರತೀಯ ರಸ್ತೆ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿವೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಅಗತ್ಯ ಮುನ್ನೆಚ್ಚರಿಕಾ ಫಲಕ, ಪ್ರತಿಫಲಕ ಗುರುತು, ಸೌರ ಬ್ಲಿಂಕರ್‌ಗಳು ಮತ್ತು ಸ್ಪಷ್ಟ ರಸ್ತೆ ಗುರುತು ಇಲ್ಲ. ಇದರಿಂದ ಈ ಜಂಕ್ಷನ್ ಅಪಘಾತ ಸ್ಥಳವಾಗಿ ಮಾರ್ಪಟ್ಟಿದೆ.
ರಾತ್ರಿ ವೇಳೆ ಇಲ್ಲಿ ಹೋಗುವುದಕ್ಕೆ ಭಯ ಆಗುತ್ತದೆ. ಸ್ಪೀಡ್ ಬ್ರೇಕರ್ ಕಾಣುವುದೇ ಇಲ್ಲ. ವಾಹನ ಏಕಾಏಕಿ ಹಾರಿಬೀಳುತ್ತದೆ ಎಂದು ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಶಿವಕುಮಾರ್ ಅಳಲು ತೋಡಿಕೊಂಡರು.
ಪ್ರತಿದಿನ ಇಲ್ಲಿ ಅಪಘಾತ ಸಂಭವಿಸುತ್ತಿರುತ್ತದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಸಾಮಾನ್ಯವಾಗಿದೆ. ಒಂದು ಸಾವು ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ದುರಂತ ಎಂದು ನಿವಾಸಿ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
ಈ ನಡುವೆ ಇತ್ತೀಚೆಗೆ ಇಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತ ಸಾರ್ವಜನಿಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ‘ಇನ್ನಷ್ಟು ಜೀವಗಳು ಹೋಗಬೇಕಾದ ನಂತರವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ?’ ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ.
ಈ ಸಮಸ್ಯೆ ಕುರಿತು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾದರೂ, ಇದುವರೆಗೆ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಈ ಜೀವಪಾಯದ ಜಂಕ್ಷನ್‌ನಲ್ಲಿ ಶಾಶ್ವತ ಪರಿಹಾರ ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕರ ಮನಸ್ಸಿನಲ್ಲಿ ಮೂಡಿದೆ.
ಎಚ್ಚರಿಕೆ ಫಲಕವೇ ಇಲ್ಲ ಬ್ಲಿಂಕರ್ ಇಲ್ಲ. ಇದು ರಾಷ್ಟ್ರೀಯ ಹೆದ್ದಾರಿಯೇ ಅಥವಾ ಮರಣಪಥವೇ ಅನ್ನೋ ಅನುಮಾನ ಬರುತ್ತದೆಶಿಲ್ಪಾ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.