ADVERTISEMENT

ದೇವನಹಳ್ಳಿ| ಸಾಂಪ್ರದಾಯಿಕ ಆಹಾರ ಪದ್ಧತಿಗೆ ಮರಳಿ: ಸಚಿವ ಕೆ.ಎಚ್. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 5:38 IST
Last Updated 23 ಜನವರಿ 2026, 5:38 IST
ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು
ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು   

ದೇವನಹಳ್ಳಿ: ಆಧುನಿಕ ಜೀವನಶೈಲಿಯಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತಿದೆ. ಆರೋಗ್ಯ ಸಮತೋಲನ ಕಾಪಾಡಿಕೊಳ್ಳಲು ಸಾಂಪ್ರದಾಯಿಕ ಆಹಾರ ಪದ್ಧತಿಗೆ ಮರಳಬೇಕು. ನವಣೆ, ಸಜ್ಜೆ, ಉದ್ದು, ರಾಗಿ ಹಾಗೂ ಜೋಳದಂತಹ ಸಿರಿಧಾನ್ಯಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಕೃಷಿ ಇಲಾಖೆಯಿಂದ ಸೋಮವಾರ ಪಟ್ಟಣದಲ್ಲಿ ನಡೆದ ‘ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ’ಗೆ ಚಾಲನೆ ನೀಡಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಹೆಚ್ಚಿನ ಸಮಯ ಕೃಷಿಯಲ್ಲಿ ತೊಡಗಿಸಿಕೊಂಡು, ಸಿರಿಧಾನ್ಯಗಳು, ಹಣ್ಣು–ಹಂಪಲುಗಳಿಂದ ಸಮೃದ್ಧವಾದ ಆಹಾರ ಸೇವಿಸುತ್ತಿದ್ದರು. ಅದರಿಂದ ಗಟ್ಟಿಯಾದ ದೇಹ ಮತ್ತು ಆರೋಗ್ಯಕರ ಜೀವನ ನಡೆಸಿ 100 ವರ್ಷಗಳವರೆಗೂ ಬದುಕುತ್ತಿದ್ದರು. ಅಂದಿನ ಆಹಾರ ಪದ್ಧತಿ ಸಮತೋಲನ ಜೀವನಕ್ಕೆ ಸಹಕಾರಿಯಾಗಿತ್ತು ಎಂದು ಹೇಳಿದರು.

ADVERTISEMENT

ಇಂದಿನ ಪೀಳಿಗೆ ಫಾಸ್ಟ್ ಫುಡ್‌ಗಳಿಗೆ ಮೊರೆ ಹೋಗಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರುಚಿ ಆಹಾರವೇ ಆರೋಗ್ಯಕರವಲ್ಲ ಎಂಬ ಅರಿವು ಯುವಜನರಲ್ಲಿ ಮೂಡಬೇಕು. ಮಕ್ಕಳ ಜನ್ಮದಿನದಂತಹ ಸಂದರ್ಭಗಳಲ್ಲಿ ಕೇಕ್‌ಗಳ ಬದಲಾಗಿ ಸಿರಿಧಾನ್ಯ ಪದಾರ್ಥಗಳು, ಹಾಲು, ರಾಗಿ ಮಿಲೆಟ್‌ಗಳಂತಹ ಪೌಷ್ಟಿಕ ಆಹಾರ ನೀಡಬೇಕು. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗುತ್ತದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿರಿಧಾನ್ಯಗಳ ಮಹತ್ವವನ್ನು ಅರಿತು, ಅವುಗಳ ಬೆಳವಣಿಗೆಗೆ ಮತ್ತು ರೈತರಿಗೆ ಉತ್ತೇಜನ ನೀಡಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ಹೇಳಿದರು.

‘ಸಿರಿಧಾನ್ಯ ನಡಿಗೆ – ಆರೋಗ್ಯದ ಕಡೆಗೆ’ ಧ್ಯೇಯ ವಾಕ್ಯದಡಿ ಟೌನ್ ಕ್ರೀಡಾಂಗಣದಿಂದ ಆರಂಭವಾದ ನಡಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಕೃಷಿಕರು ಉತ್ಸಾಹದಿಂದ ಭಾಗವಹಿಸಿ ಸಿರಿಧಾನ್ಯಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ರಾಜಣ್ಣ, ತಾಲ್ಲೂಕು ಅಧ್ಯಕ್ಷ ಸಿ. ಜಗನ್ನಾಥ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ಸಹಾಯಕ ನಿರ್ದೇಶಕಿ ಸುಶೀಲಮ್ಮ, ಕೆಪಿಸಿಸಿ ಸದಸ್ಯ ಚಿನ್ನಪ್ಪ, ತಹಶೀಲ್ದಾರ್ ಅನಿಲ್ ಕುಮಾರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್. ರವಿಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.