
ದೇವನಹಳ್ಳಿ: ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಮೂಲಸೌಕರ್ಯ ಸಮಸ್ಯೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 2026–27ನೇ ಸಾಲಿನ ಬಜೆಟ್‌ನಲ್ಲಿ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕೆಂದು ಆಕ್ರೋಶಭರಿತವಾಗಿ ಆಗ್ರಹಿಸಿದರು.
ಸಭೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಪುರಸಭೆ ವಿರುದ್ಧ ಅಸಮಾಧಾನ ಹೊರಹಾಕಿದರು. ಪಟ್ಟಣದಲ್ಲಿ ಸ್ವಚ್ಛತೆ ಸಂಪೂರ್ಣ ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡುಬರುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಸ ಸಂಗ್ರಹ ವಾಹನಗಳು ಬರುತ್ತಿದ್ದರೂ ಕಸದ ರಾಶಿ ಕಡಿಮೆಯಾಗುತ್ತಿಲ್ಲ. ತಕ್ಷಣವೇ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಇಲ್ಲವಾದರೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರ ಮೇಲೆ ಕಠಿಣ ದಂಡ ವಿಧಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ ಒತ್ತಾಯಿಸಿದರು.
ಪುರಸಭೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗಗಳು ಅಕ್ರಮವಾಗಿ ಒತ್ತುವರಿ ಆಗುತ್ತಿದ್ದು, ಪುರಸಭೆ ಮೌನ ವಹಿಸಿದೆ ಎಂದು ಆರೋಪಿಸಿದರು. ಎಲ್ಲ ಸರ್ಕಾರಿ ಜಾಗಗಳನ್ನು ತಕ್ಷಣ ಗುರುತಿಸಿ ತಂತಿಬೇಲಿ ನಿರ್ಮಿಸಬೇಕು. ಫುಟ್‌ಪಾತ್ ವ್ಯಾಪಾರಿಗಳಿಗೆ ಶಾಶ್ವತ ಜಾಗ ಕಲ್ಪಿಸಬೇಕು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ತಿಳಿಸಿದರು.
ಹಳೆ ಬಸ್ ನಿಲ್ದಾಣದ ಬಳಿಯ ಕುಂಟೆ ಜಾಗವನ್ನು ಪುರಸಭೆ ವಶಕ್ಕೆ ಪಡೆದು ಅಭಿವೃದ್ಧಿಪಡಿಸಬೇಕು. ಈ ಕುರಿತು ವರ್ಷಗಳಿಂದ ಮಾತು ಮಾತ್ರ ನಡೆಯುತ್ತಿದೆ, ಕೆಲಸ ಮಾತ್ರ ಆಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಗಳಲ್ಲಿರುವ ಸಿಎ ಸೈಟ್, ಪಾರ್ಕ್, ಸರ್ಕಾರಿ ಖರಾಬು ಜಾಗಗಳು ಅಕ್ರಮವಾಗಿ ಇತರರ ಪಾಲಾಗುತ್ತಿವೆ. ಇದನ್ನು ತಡೆಯಲು ತಕ್ಷಣ ತಂತಿಬೇಲಿ ನಿರ್ಮಿಸಬೇಕು. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಬಜೆಟ್‌ನಲ್ಲಿ ಹಣ ಮೀಸಲಿಡಬೇಕೆಂದು ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ ಆಗ್ರಹಿಸಿದರು.
ಪುರಸಭೆ ಮಾಜಿ ಸದಸ್ಯರಾದ ಲೀಲಾವತಿ ಶಿವಕುಮಾರ್, ಎಂ. ಮೂರ್ತಿ, ರತ್ನಮ್ಮ, ಕಂದಾಯಾಧಿಕಾರಿ ರಮೇಶ್ ಬಾಬು, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಮಂಜಪ್ಪ, ಎಂಜಿನಿಯರ್ ಗಜೇಂದ್ರ, ವ್ಯವಸ್ಥಾಪಕಿ ಸರಸ್ವತಿ, ಸಮುದಾಯ ಸಂಘಟನಾಧಿಕಾರಿ ಭೈರಪ್ಪ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ ಉಪಸ್ಥಿತರಿದ್ದರು.
ಉದ್ಯಾನ ನಿರ್ವಹಣೆ ಮಹಿಳಾ ಸಂಘಕ್ಕೆ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳವರು ಮುಂದಿಟ್ಟ ಬೇಡಿಕೆಗಳನ್ನು ಬಜೆಟ್‌ನಲ್ಲಿ ಪರಿಗಣಿಸಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ಏಳು ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದ್ದು ಅದರ ನಿರ್ವಹಣೆಯನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ. ಶಿವಮೂರ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.