ADVERTISEMENT

ದೇವನಹಳ್ಳಿ: ತಿಂಗಳೊಳಗೆ ಕಿತ್ತು ಬಂದ ರಸ್ತೆ 

ಹೊಸದಾಗಿ ನಿರ್ಮಾಣಗೊಂಡಿರುವ ₹30ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 2:44 IST
Last Updated 25 ಜನವರಿ 2026, 2:44 IST
ವಿಜಯಪುರ  5ನೇ ವಾರ್ಡ್‌ನ ಮಾರುತಿ ನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯಲ್ಲಿ ಜಲ್ಲಿ ಕಲ್ಲು ಮರಳು ಮೇಲೆ ಕಾಣಿಸಿಕೊಂಡಿದೆ 
ವಿಜಯಪುರ  5ನೇ ವಾರ್ಡ್‌ನ ಮಾರುತಿ ನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯಲ್ಲಿ ಜಲ್ಲಿ ಕಲ್ಲು ಮರಳು ಮೇಲೆ ಕಾಣಿಸಿಕೊಂಡಿದೆ    

ವಿಜಯಪುರ (ದೇವನಹಳ್ಳಿ): ಪಟ್ಟಣದ 5ನೇ ವಾರ್ಡ್‌ನ ಮಾರುತಿ ನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ₹30ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಯು ಸಂಪೂರ್ಣ ಕಳಪೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಕಾಮಗಾರಿ ಮುಗಿದು 20 ದಿನ ಕಳೆಯುವುದರೊಳಗೆ ರಸ್ತೆಯುದ್ಧಕ್ಕೂ ಜಲ್ಲಿ ಕಲ್ಲು, ಮರಳು ಮೇಲೆ ಕಾಣಿಸಿಕೊಂಡಿದೆ. ಇದರಿಂದ ಪಾದಾಚಾರಿಗಳ ಸಂಚಾರಕ್ಕೆ ತೊಂದರೆ ಆಗಿದೆ. ಈ ರಸ್ತೆಯಲ್ಲಿ ಸಾಗುವ ವಾಹನಗಳ ಹಿಂದೆ ಬರುವ ದೂಳಿಗೆ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ.

ಅನೇಕ ವರ್ಷಗಳಿಂದ ರಸ್ತೆಯು ಡಾಂಬರೀಕರಣ ಕಾಣದೆ ದೊಡ್ಡ ದೊಡ್ಡ ಗುಂಡಿಗಳಿಂದ ಸಂಚಾರಕ್ಕೆ ಸಂಕಷ್ಟ ಅನುಭವಿಸುವಂತಾಗಿತ್ತು. ಈಗ ಹೊಸ ರಸ್ತೆ ನಿರ್ಮಾಣದಿಂದ ಸಂತೋಷವಾಗಿತ್ತು. ಆದರೆ, ಕಳಪೆ ಕಾಮಗಾರಿ ನಡೆದಿರುವುದು ನೋಡಿದರೆ ಈ ಹೊಸ ರಸ್ತೆ ಬಹಳ ದಿನಗಳ ಬಾಳಿಕೆ ಬರುವುದಿಲ್ಲ ಎಂದು ಗುತ್ತಿಗೆದಾರನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಶಾಸಕರ ಅನುದಾನದಡಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಇಡೀ ರಸ್ತೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಹೆಸರು ಹೇಳದ ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದರು.

ರಸ್ತೆ ಕಳಪೆ ಗುಣಮಟ್ಟದ ಕುರಿತು ವಾರ್ಡ್‌ ಪುರಸಭೆ ಸದಸ್ಯ ರಾಜಣ್ಣಗೆ ಕರೆ ಮಾಡಿ ವಿಚಾರಿಸಿದರೆ, ‘ಮೊದಲಿಗೆ ಸಚಿವರ ಜತೆ ಇರುವ ಮಹೇಶ್ ಅವರು ಸ್ವಂತ ಖರ್ಚಿನಿಂದ ರಸ್ತೆ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದರು. ನಂತರ ಶಾಸಕರ ಅನುದಾಡಿ ರಸ್ತೆ ಮಾಡಲಾಗುತ್ತಿದೆ’ ಎಂಬ ಗೊಂದಲ ಹೇಳಿಕೆ ನೀಡಿದರು.

ರಸ್ತೆ ಕಳಪೆಯಿಂದ ಕೂಡಿಲ್ಲ. ಯಾವುದೇ ಸಮಸ್ಯೆ ಇಲ್ಲ. ವಿರೋಧಿಗಳು ಬೇಕಂತಲೇ ಅಪಪ್ರಚಾರ ಮಾಡಲು ತಪ್ಪು ಮಾಹಿತಿ ನೀಡಿದ್ದಾರೆ. ಈ ರಸ್ತೆಯಲ್ಲಿ ದೊಡ್ಡ ಹಳ್ಳಗಳು ಬಿದ್ದಿದ್ದವು. ಈಗ ಆಗಿರುವ ರಸ್ತೆ ಮೇಲೆ 3 ಇಂಚು ಮತ್ತೆ ಕಾಂಕ್ರೀಟ್ ಹಾಕಲಾಗುವುದು ಎಂದು ಹೇಳಿದರು.

ಯಾರು ಈ ಗುತ್ತಿಗೆದಾರ?

ಪುರಸಭೆ ವ್ಯಾಪ್ತಿಯ 5ನೇ ವಾರ್ಡ್‌ನ ಮಾರುತಿ ನಗರದಲ್ಲಿ ನಡೆದಿರುವ ಕಳಪೆ ಕಾಂಕ್ರೀಟ್ ರಸ್ತೆ ಕಾಮಗಾರಿ ಕುರಿತು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಅವರನ್ನು ವಿಚಾರಿಸಿದರೆ ನಮಗೆ ಮಾಹಿತಿ ಇಲ್ಲ. ಪುರಸಭೆಯಿಂದ ಆಗಿಲ್ಲ. ಗುತ್ತಿಗೆದಾರರನ್ನು ವಿಚಾರಿಸಿ ಎಂದರು. ವಾರ್ಡ್‌ನ ಸದಸ್ಯ ರಾಜಣ್ಣ ಅವರು ಹೆಸರು ಹೇಳಿದ ಮಹೇಶ್‌ಗೆ ಫೋನ್ ಕರೆ ಮೂಲಕ ವಿಚಾರಿಸಿದರೆ ಈ ರಸ್ತೆ ಮಾಡಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನೂ ಈ ರಸ್ತೆ ಮಾಡಿದವರು ಯಾರು ಎಂಬುದು ಈಗ ಸ್ಥಳೀಯರಲ್ಲಿ ಪ್ರಶ್ನೆ ಮೂಡಿದೆ. ಕಳಪೆ ಕಾಂಕ್ರೀಟ್ ರಸ್ತೆ ಮಾಡಿದ ಗುತ್ತಿಗೆದಾರನನ್ನು ಪತ್ತೆ ಹಚ್ಚಿ ಆತನ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.