ದೇವನಹಳ್ಳಿ: ಪಟ್ಟಣದ ಬಿ.ಬಿ. ರಸ್ತೆಯಲ್ಲಿರುವ ಅಂಚೆ ಕಚೇರಿಯಲ್ಲಿ ಪಾರ್ಸಲ್ ವಸ್ತುಗಳನ್ನು ತುಂಬಲಾಗಿದ್ದು, ಗೋದಾಮಿನಂತೆ ಆಗಿದೆ. ಜನರು ಅಂಚೆ ಸೇವೆ ಪಡೆಯಲು ಇಕ್ಕಟ್ಟಿನಲ್ಲಿಯೇ ಸರತಿ ಸಾಲಿನಲ್ಲಿ ನಿಂತು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಭಾರತೀಯ ಪೋಸ್ಟಲ್ ಬ್ಯಾಂಕ್‌ನಲ್ಲಿ ಹಣ ಕಾಸಿನ ವ್ಯವಹಾರ ಮಾಡಲು, ಹಣ ತುಂಬಲು ಹಿರಿಯ ನಾಗರಿಕರು ಪಂಚಣಿ ಹಣ ಪಡೆಯಲು, ನಿಶ್ಚಿತ ಠೇವಣಿಯ ಬಡ್ಡಿ ಹಣ ಪಡೆದುಕೊಳ್ಳಲು ಅಂಚೆ ಕಚೇರಿಗೆ ಬರುವ ಹಿರಿ ಜೀವಿಗಳಿಗೆ ಕುಳಿತುಕೊಳ್ಳಲು ಅವಕಾಶ ಇಲ್ಲದಂತೆ ಸರಕು ತುಂಬಿದ ಬಾಕ್ಸ್‌ಗಳನ್ನು ಇರಿಸಲಾಗಿದೆ.
ವಿವಿಧ ಕಚೇರಿಗಳಿಗೆ ಅಂಚೆ ಮೂಲಕ ಪತ್ರ ವ್ಯವಹಾರ ಮಾಡಲು ಬರುವ ಸಾರ್ವಜನಿಕರು, ಸರ್ಕಾರಿ ಗುಮಾಸ್ತರು, ವಕೀಲರು ಇಕ್ಕಟ್ಟಿನ ಜಾಗದಲ್ಲಿಯೇ ಸರತಿ ಸಾಲು ನಿಂತು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಪೋಸ್ಟಲ್ ಅರ್ಡರ್ ಪಡೆಯುತ್ತಿದ್ದಾರೆ.
‘ಪಾಸ್ ಬುಕ್ ಮುದ್ರಣ ಮಾಡಿದರಷ್ಟೇ ನಮಗೆ ನಾವು ಇಟ್ಟಿರುವ ಹಣಕ್ಕೆ ಬಡ್ಡಿ ಬಂದಿದೆಯೋ ಇಲ್ಲವೇ ಎಂದು ತಿಳಿಯುತ್ತದೆ. ನಮ್ಮ ಹಣಕ್ಕೆ ಬಂದ ಬಡ್ಡಿಯಿಂದ ಜೀವನ ಮಾಡುವ ನಾವುಗಳು ಅದನ್ನು ತಿಳಿದು ಕೊಳ್ಳಲು ದಿನವಿಡೀ ಸರತಿ ಸಾಲಿನಲ್ಲಿ ನಿಂತುಕೊಳ್ಳ ಬೇಕಿದೆ’ ಎಂದು ಹಿರಿಯ ಜೀವ ಲಕ್ಷ್ಮಮ್ಮ ಬೇಸರ ವ್ಯಕ್ತಪಡಿಸಿದರು.
‘ಇಲ್ಲಿ ಕನಿಷ್ಠ ಮೂಲ ಸೌಕರ್ಯವೂ ಇಲ್ಲ. ಕುಡಿಯಲು ನೀರು ಇಟ್ಟಿಲ್ಲ. ಒಂದೊಂದು ಬಾರಿ ಸ್ಟಾಂಪ್‌ಗಳು ಲಭ್ಯ ಇರುವುದಿಲ್ಲ. ಹಿಂದಿ ಭಾಷಿಕರನ್ನು ಕಂಪ್ಯೂಟರ್ ಅಪರೇಟರ್‌ಗಳನ್ನಾಗಿ ನೇಮಕ ಮಾಡಿದ್ದಾರೆ. ನಮ್ಮ ನಾಡಿನಲ್ಲಿ ಕನ್ನಡದಲ್ಲಿ ಸೇವೆ ಪಡೆಯುವುದು ಕನಸ್ಸಾಗುತ್ತಿದೆ’ ಎಂದು ವಕೀಲ ಮಂಜುನಾಥ್ ಅಲವತ್ತುಕೊಂಡರು.
ಅವ್ಯವಸ್ಥೆಗಳ ಆಗರ
‘ದೇವನಹಳ್ಳಿ ಅಂಚೆ ಕಚೇರಿಯೂ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಪೋಸ್ಟ್ ವ್ಯವಹಾರ ಮಾಡುವ ಸಿಬ್ಬಂದಿಗೆ ಕನ್ನಡದ ಅರಿವಿಲ್ಲ. ನಾವು ಬರೆದಿರುವ ವಿಳಾಸವನ್ನು ಇಂಗ್ಲಿಷ್‌ನಲ್ಲಿ ಹೇಳಬೇಕಿದೆ. ಇಂತಹ ಸಾಮಾನ್ಯ ಸೇವೆಗೆ ಕನ್ನಡ ಬರುವ ಸಿಬ್ಬಂದಿಯನ್ನು ನೇಮಿಸಬೇಕು’ ಎಂದು ಸ್ಥಳೀಯ ನಿವಾಸಿ ಗೋಪಾಲ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.