ದೇವನಹಳ್ಳಿ: ರೇಬೀಸ್ ತೀವ್ರ ಪ್ರಮಾಣದಲ್ಲಿ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ಮಾರಣಾಂತಿಕ ಕಾಯಿಲೆ ಯಾಗಿದೆ ಎಂದು ದೇವನಹಳ್ಳಿ ಪಶು ವೈದ್ಯ, ಪಶುಪಾಲನ ಇಲಾಖೆ ವೈದ್ಯಾಧಿಕಾರಿ ಮಹಮದ್ ಜುನೈನ್ ಅಲಿ ತಿಳಿಸಿದರು.
ಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುನ ಪ್ರೌಢಶಾಲಾ ವಿಭಾಗದಲ್ಲಿ ಶನಿವಾರ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಹಮ್ಮಿಕೊಂಡಿದ್ದ ರೇಬಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೇಬಿಸ್ ತೀವ್ರಗೊಂಡರೆ ಅದನ್ನು ನಿಗ್ರಹಿಸಲು ಅಸಾಧ್ಯ. ಆದ ಕಾರಣ ನಾಯಿಗಳಿಗೆ ರೇಬಿಸ್ ನಿರೋಧಕ ನೀಡಿ ಈ ರೋಗ ಹರಡುವುದನ್ನು ತಡೆಯಬೇಕಾಗಿದೆ ಎಂದು ತಿಳಿಸಿದರು.
ರೇಬೀಸ್ ಕಾಯಿಲೆಯು ಸೋಂಕಿತ ನಾಯಿ, ಬೆಕ್ಕು, ನರಿ, ಹಸು, ಕುದುರೆ, ಮುಂಗುಸಿ, ಇತರೆ ಕಾಡು ಪ್ರಾಣಿಗಳ ಕಡಿತದಿಂದ ಹರಡುತ್ತದೆ. ಪ್ರತಿಯೊಬ್ಬರು ಸಾಕು ಪ್ರಾಣಿಗಳಿಗೆ ರೇಬಿಸ್ ನಿಯಂತ್ರಣ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.
ನಾಯಿ ಕಡಿತದ ಗಾಯವನ್ನು ತಕ್ಷಣವೇ ಸಾಬೂನಿನಿಂದ ಸ್ವಚ್ಛವಾಗಿ ಹರಿಯುವ ನೀರಿನಿಂದ ತೊಳೆಯುವುದು. ನಾಯಿ ಕಚ್ಚಿದ ಗಾಯಕ್ಕೆ ಮಣ್ಣು, ಅರಿಶಿನ, ವೀಳ್ಯದೆಲೆ ಎಲೆ, ಸುಣ್ಣ ಎಣ್ಣೆಂತಹ ವಸ್ತುಗಳನ್ನು ಹಚ್ಚಬಾರದು, ಕಡಿತದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಧಾವಿಸಿ ವೈದ್ಯರ ಸಲಹೆಯಂತೆ ಐದು ಡೋಸ್ ರೇಬೀಸ್ ಲಸಿಕೆ ಪಡೆಯಬೇಕು ಎಂದು ತಿಳಿಸಿದರು.
ಶಾಲಾ ಹಂತದಿಂದಲೇ ಇಂತಹ ಜಾಗೃತಿ ಮೂಲಕ ಮಕ್ಕಳಿಗೆ ಅರಿವು ಮೂಡಿಸಲು ಇಲಾಖೆ ಮುಂದಾಗಿದೆ. ಮಕ್ಕಳು ಈ ಕುರಿತು ನಿಮ್ಮ ಮನೆಯಲ್ಲಿ ಹಾಗೂ ನೆರೆ ಹೊರೆಯ ಸ್ನೇಹಿತರಲ್ಲಿ ಜಾಗೃತಿ ಮೂಡಿಸಿ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ನೀಲಕಂಠ ಗಾವಾರ್ಕರ್, ದೇವನಹಳ್ಳಿ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಜಯಪ್ರಕಾಶ್, ಮಾಜಿ ಅಧ್ಯಕ್ಷ ಶ್ರೀರಾಮಯ್ಯ,ನಿಕಟ ಪೂರ್ವ ಅಧ್ಯಕ್ಷ ಜಿ.ಕೆ.ನಾರಾಯಣ ಸ್ವಾಮಿ, ಮಾಜಿ ಖಜಾಂಚಿ ಎಸ್.ರಮೇಶ್ ಹಾಗೂ ಶಿಕ್ಷಕ ವರ್ಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.