ADVERTISEMENT

ದೇವನಹಳ್ಳಿಯಲ್ಲೂ ನಡೆಯಲಿ ‘ಕಸ ಸುರಿಯುವ ಹಬ್ಬ’: ವಿವಿಧ ಸಂಘಟನೆಗಳ ಆಗ್ರಹ

ಎಲ್ಲೆಂದರಲ್ಲಿ ಕಸ । ಅವೈಜ್ಞಾನಿಕ ಕಸ ವಿಲೇವಾರಿ। ರಸ್ತೆ ಬದಿ ಬೆಟ್ಟದಂತೆ ಬೆಳೆಯತ್ತಿದೆ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 3:00 IST
Last Updated 3 ನವೆಂಬರ್ 2025, 3:00 IST
ದೇವನಹಳ್ಳಿ ಬಸ್ ಡಿಪೊ  ಹಿಂಭಾಗದಲ್ಲಿರುವ ಡಿ.ಎಂ.ಕೃಷ್ಣಪ್ಪ ಬಡಾವಣೆಯ ಮುಖ್ಯದ್ವಾರದ ಬಳಿ ಕಸ ವಿಲೇವಾರಿಯಾಗದೆ ಬೀದಿ ನಾಯಿಗಳು ಕಸ ಎಳೆದಾಡುತ್ತಿರುವುದು
ದೇವನಹಳ್ಳಿ ಬಸ್ ಡಿಪೊ  ಹಿಂಭಾಗದಲ್ಲಿರುವ ಡಿ.ಎಂ.ಕೃಷ್ಣಪ್ಪ ಬಡಾವಣೆಯ ಮುಖ್ಯದ್ವಾರದ ಬಳಿ ಕಸ ವಿಲೇವಾರಿಯಾಗದೆ ಬೀದಿ ನಾಯಿಗಳು ಕಸ ಎಳೆದಾಡುತ್ತಿರುವುದು   

ದೇವನಹಳ್ಳಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ಕಸ ಸುರಿಯುವವರ ಮನೆಯ ಮುಂದೆ ಜಿಬಿಎ ಅಧಿಕಾರಿಗಳು ಕಸ ಸುರಿದು ಜಾಗೃತಿ ಮೂಡಿಸಿ ದಂಡ ವಸೂಲು ಮಾಡುತ್ತಿರುವ ‘ಕಸ ಸುರಿಯುವ ಹಬ್ಬ’ವನ್ನೂ ದೇವನಹಳ್ಳಿ ಪಟ್ಟಣದಲ್ಲಿ ಆರಂಭಿಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿವೆ.

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಪುರಸಭೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಸಾರ್ವಜನಿಕರಿಂದ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಗೊಳಿಸಿ ಸಂಗ್ರಹ ಮಾಡುವಲ್ಲಿ ಎಡವಿದ್ದು, ಪ್ರಮುಖ ರಸ್ತೆಗಳ ಬದಿಯಲ್ಲಿ ಕಸದ ರಾಶಿ ಸೃಷ್ಟಿಯಾಗಿದೆ ಎಂದು ದೂರಿದ್ದಾರೆ.

ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತಿದೆ. ಎಲ್ಲವನ್ನು ಕಂಡರೂ ಕಾಣದಂತೆ ಪುರಸಭೆ ಸಿಬ್ಬಂದಿ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಸ್ವಚ್ಛತೆ ಕಣ್ಮರೆಯಾಗಿದ್ದು, ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಮುಂದೆ ಪಟ್ಟಣದ ಮಾನ ಹಾರಾಜು ಆಗಿದೆ ಎಂದು ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಆರಾಧ್ಯ ಆರೋಪಿಸುತ್ತಾರೆ.

ADVERTISEMENT

ಎಲ್ಲೆಂದರಲ್ಲಿ ಕಸ ಸಂಗ್ರಹವಾದರೇ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತಿದೆ. ಅನೇಕ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ ಜನರು. ವಾತಾವರಣವನ್ನು ಕಲುಷಿತಗೊಳಿಸಿ ಸುಂದರಗೊಳ್ಳಬೇಕಾದ ಪಟ್ಟಣವನ್ನು ಕೊಳಗೇರಿಯಾಗಿ ಬದಲಾಯಿಸುವ ಅಧಿಕಾರಿಗಳ ವರ್ತನೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ ಮಾನವ ಹಕ್ಕುಗಳ ರಕ್ಷಣ ವೇದಿಕೆಯ ಅಧ್ಯಕ್ಷ ಸುಧಾಕರ್‌.

‘ಸಾಮಾಜಿಕ ಮಾಧ್ಯಮದಲ್ಲಿ ಕಸ ವಿಲೇವಾರಿ ಮಾಡುವಂತೆ ಆಗ್ರಹಿಸಿ ವಿಡಿಯೊ ಹರಿಬಿಟ್ಟಿದ್ದೆ. ಇಲ್ಲಿನ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ನನ್ನನ್ನು ಪುರಸಭೆ ಕಚೇರಿಗೆ ಕರೆಯಿಸಿಕೊಂಡು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕದಂತೆ ಧಮ್ಕಿ ಹಾಕಿದ್ದರು’ ಎಂದು ಆರೋಪಿಸುತ್ತಾರೆ ಯುವಕ ಪುನೀತ್.

ದೇವನಹಳ್ಳಿ ಗೋಕರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬದಿಯಲ್ಲಿ ಕಸ

ಕೋರ್ಟ್‌ನಿಂದ ಛೀಮಾರಿ: ಬುದ್ಧಿ ಕಲಿಯದ ಆಡಳಿತ ವರ್ಗ

ಜನ ವಸತಿ ಪ್ರದೇಶಗಳಲ್ಲಿ ಸ್ವಚ್ಛ ವಾತಾವರಣ ಸೃಷ್ಟಿಸುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಇಲ್ಲದಿದ್ದರೇ ಸಂವಿಧಾನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಂತೆ ಎಂದು ಹಲವಾರು ಪ್ರಕರಣಗಳಲ್ಲಿ ಹೈಕೋರ್ಟ್‌ ಆದೇಶ ನೀಡಿ ಸ್ಥಳೀಯ ಸಂಸ್ಥೆಗಳಿಗೆ ಛೀಮಾರಿ ಹಾಕಿದೆ. ಆದರೂ ಸ್ಥಳೀಯ ಸಂಸ್ಥೆಗಳು ಎಚ್ಚೆತ್ತುಕೊಂಡಿಲ್ಲ. ಜಾಣ ಕುರುಡರಂತೆ ಪುರಸಭೆ ಸಿಬ್ಬಂದಿ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ ವಕೀಲ ಬಿ.ಸಿ.ನವೀನ್‌ ಕುಮಾರ್‌. ದಂಡ ವಿಧಿಸಲು ಹಿಂಜರಿಕೆ ಏಕೆ? ಎಲ್ಲೆಂದರಲ್ಲಿ ಕಸ ಎಸೆಯುವ ಸಾರ್ವಜನಿಕರ ವಿರುದ್ಧ ಕಾನೂನು ರೀತ್ಯಾ ದಂಡ ವಿಧಿಸಲು ಪುರಸಭೆ ಅಧಿಕಾರಿಗಳ ಕೈ ಕಟ್ಟಿ ಹಾಕಿರುವವರು ಯಾರು? ಎಂದು ರೈತ ಹೋರಾಟಗಾರ ಬೈಚಾಪುರ ಶಶಿಧರ್‌ ಪ್ರಶ್ನಿಸಿದ್ದಾರೆ. ಜನ ಸ್ನೇಹಿಯಾಗಿ ಇಲ್ಲಿ ಯಾವುದೇ ಕೆಲಸಗಳು ಆಗುವುದಿಲ್ಲ. ದೇವನಹಳ್ಳಿಯ ಪ್ರಮುಖ ಸ್ಥಳಗಳಲ್ಲಿ ಕಸ ಸುರಿದಿದ್ದರೂ ಅದರ ವಿಲೇವಾರಿ ಮಾಡಬೇಕು ಎಂಬ ಕನಿಷ್ಠ ಕರ್ತವ್ಯ ಪ್ರಜ್ಞೆಯೂ ಇಲ್ಲಿರುವ ಅಧಿಕಾರಿಗಳಿಗೆ ಇದ್ದಂತೆ ಕಾಣುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಜನ ಸ್ಪಂದಿಸದಿದ್ದರೇ ನಾವೇನು ಮಾಡೋಣ?

‘ಪುರಸಭೆ ವ್ಯಾಪ್ತಿಯ ಮನೆಗಳುವರು ಕಸವನ್ನು ವೈಜ್ಞಾನಿಕವಾಗಿ ಬೇರ್ಪಡಿಸಿ ನೀಡುವಂತೆ ಸಾಕಷ್ಟು ಬಾರಿ ಜಾಗೃತಿ ಮೂಡಿಸಿದರು ಜನರಿಗೆ ಅರ್ಥವಾಗುತ್ತಿಲ್ಲ. ಪ್ರಮುಖ ವ್ಯಾಪಾರದ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುತ್ತಾರೆ. ಕಸದ ಗಾಡಿ ಬಂದರೂ ಕಸ ನೀಡುವುದಿಲ್ಲ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಕಸ ಹಾಕಲಾಗುತ್ತಿದೆ. ದಂಡ ವಿಧಿಸಿದರೇ ಪುರಸಭೆಯ ಸದಸ್ಯರು ಬಂದು ಯಾವುದೇ ಕ್ರಮಕೈಗೊಳ್ಳದಂತೆ ಒತ್ತಡ ಹೇರುತ್ತಾರೆ. ನಾವು ಇಲ್ಲಿ ಕೆಲಸ ಮಾಡಲು ಸಾರ್ವಜನಿಕರ ಸಹಕಾರವೂ ಬೇಕಿದೆ’ ಎಂದು ಹೆಸರೇಳಲು ಇಚ್ಛಿಸದ ಪುರಸಭೆಯ ಸಿಬ್ಬಂದಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.