ದೇವನಹಳ್ಳಿ: ಕಸುವನಹಳ್ಳಿ ಕ್ರಾಸ್‌ನಿಂದ ಐವಿಸಿ ರಸ್ತೆಯವರೆಗೆ ತಿಂಡ್ಲು ಮಾರ್ಗದಿಂದ ಸಂಪರ್ಕ ಕಲ್ಪಿಸುವ 4.6 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗುಂಡಿ ರಸ್ತೆಯಲ್ಲಿ ನಿಂತ ಕೆಸರಿನಲ್ಲಿ ಪೈರು ನಾಟಿ ಮಾಡಿ ಪಂಡಿತಪುರ, ಜುಟ್ಟನಹಳ್ಳಿ, ತಿಂಡ್ಲು ಮತ್ತು ಸುತ್ತಮುತ್ತಮುತ್ತಲಿನ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ಸುಮಾರು 16 ವರ್ಷದಿಂದಲೂ ರಸ್ತೆ ಗುಂಡಿಮಯವಾಗಿದೆ. ಆದರೂ ಯಾರು ರಸ್ತೆ ಸಂಬಂಧ ಗಮನ ಹರಿಸಿಲ್ಲ ಎಂದು ಸಚಿವರು ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ರಸ್ತೆಯಲ್ಲಿ ಈಚೆಗೆ ದ್ವಿಚಕ್ರ ವಾಹನ ಸವಾರರೊಬ್ಬರು ಬಿದ್ದು ಮೃತಪಟ್ಟಿದ್ದಾರೆ. ಈ ರಸ್ತೆಯೂ ಸಂಚಾರಕ್ಕೆ ಯೋಗ್ಯವಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಶಾಶ್ವತ ಪರಿಹಾರ ಕೊಡಬೇಕು. ಅಲ್ಲಿಯವರೆಗೂ ರಸ್ತೆ ಬಂದ್ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ರಸ್ತೆ ಅಭಿವೃದ್ಧಿ ಕಾಮಗಾರಿಯೂ ಮಂಜೂರಾಗಿದ್ದರೂ ಕಾರ್ಯಗತವಾಗಿಲ್ಲ. ತಾಲ್ಲೂಕಿನ ಗಡಿಭಾಗ ರಸ್ತೆ ಎಂದು ಎಲ್ಲರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಐವಿಸಿ ರಸ್ತೆಯಿಂದ ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶ ಬಾಶೆಟ್ಟಹಳ್ಳಿಗೆ ಸಂಪರ್ಕ ರಸ್ತೆ ಇದಾಗಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬೈಕ್ ಸವಾರರು ಮತ್ತು ಇತರೆ ವಾಹನ ಚಾಲಕರು, ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡಾಡುತ್ತಾರೆ. ಇವರೆಲ್ಲರ ಹಿತದೃಷ್ಟಿಯಿಂದ ಶೀಘ್ರ ಹೊಸ ರಸ್ತೆ ನಿರ್ಮಿಸಬೇಕು. ಅಲ್ಲಿಯವರೆಗೆ ಗುಂಡಿ ಮುಚ್ಚಿಸಬೇಕೆಂದು ಪ್ರತಿಭಟನನಿರತರು ಆಗ್ರಹಿಸಿದರು.
ಜುಟ್ಟನಹಳ್ಳಿ ಗ್ರಾಮದ ಹಿರಿಯ ಮುಖಂಡ ತಮ್ಮಣ್ಣಪ್ಪ, ಪಂಡಿತಪುರ ಗ್ರಾಮದ ಮಂಜುನಾಥ್, ನರಸಿಂಹಮೂರ್ತಿ, ಅಶೋಕ್, ಉಮೇಶ್, ನಾಗೇಶ್, ಮನು, ವಸಂತ್, ಮುನಿಕೃಷ್ಣ, ಕೆಂಪೇಗೌಡ, ಕೆಂಪರಾಜು, ಜೆ.ಡಿ. ಮುನಿಕೃಷ್ಣ ಇದ್ದರು.
ಕೈಗಾರಿಕಾ ಪ್ರದೇಶ ಹಾಗೂ ಎರಡು ತಾಲ್ಲೂಕುಗಳ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯನ್ನು ಕಳೆದ 16 ವರ್ಷದಿಂದ ದುರಸ್ತಿ ಮಾಡಿಸುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಇಚ್ಛಾ ಶಕ್ತಿ ತೋರುತ್ತಿಲ್ಲಸಿ.ಚೇತನ್‌ಗೌಡ ಅಧ್ಯಕ್ಷ ಅರದೇಶನಹಳ್ಳಿ ಸಹಕಾರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.