ADVERTISEMENT

ಘಾಟಿ ಪ್ರಾಧಿಕಾರವಾದರೆ ಗ್ರಾಮಗಳ ಅಭಿವೃದ್ಧಿ: ಶಾಸಕ ಟಿ.ವೆಂಕಟರಮಣಯ್ಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 6:09 IST
Last Updated 2 ಏಪ್ರಿಲ್ 2021, 6:09 IST
ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಜರಾಯಿ ಇಲಾಖೆಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಶಾಸಕ ಟಿ.ವೆಂಕಟರಮಣಯ್ಯ, ನಿಸರ್ಗ ನಾರಾಯಣಸ್ವಾಮಿ ಉದ್ಘಾಟಿಸಿದರು
ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಜರಾಯಿ ಇಲಾಖೆಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಶಾಸಕ ಟಿ.ವೆಂಕಟರಮಣಯ್ಯ, ನಿಸರ್ಗ ನಾರಾಯಣಸ್ವಾಮಿ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ‘ತಾಲ್ಲೂಕಿನ ಪ್ರಸಿದ್ಧ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯ ದೇವಾಲಯವನ್ನು ಮುಜರಾಯಿ ಇಲಾಖೆಯಿಂದ ಬೇರ್ಪಡಿಸಿ ಪ್ರಾಧಿಕಾರ ರಚನೆ ಮಾಡಿದರೆ ಮಾತ್ರ ದೇವಾಲಯದ ಆದಾಯವನ್ನು ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುಕೂಲವಾಗಲಿದೆ’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ತಾಲ್ಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಮುಜರಾಯಿ ಇಲಾಖೆಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಮೂರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಮಿಶ್ರ ಸರ್ಕಾರದ ಯೋಜನೆಗಳಷ್ಟೆ ಮುಗಿದಿದ್ದು ಬಿಜೆಪಿ ಸರ್ಕಾರವು ಬರಿ ಹಗರಣಗಳಲ್ಲಿ ಕಾಲ ಕಳೆಯುತ್ತಿದೆ. ಕೊರೊನಾ ಸಂಕಷ್ಟದಲ್ಲಿ ಜನರ ಬದುಕಿಗೆ ಬೇಕಾದ ಪೂರಕ ಅನುದಾನ ಕಲ್ಪಿಸುತ್ತಿಲ್ಲ’ ಎಂದರು.

ADVERTISEMENT

ದೇವನಹಳ್ಳಿ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಈ ಭಾಗದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರಾದಅನುದಾನದಿಂದ ಎಲ್ಲಾ ಗ್ರಾಮಗಳಿಗೆ ರಸ್ತೆ ನಿರ್ಮಿಸಲಾಗಿದೆ. ದೇವಾಲಯದ ಹಣ ಬಳಸಿಕೊಂಡು ಗ್ರಾಮಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಅವಕಾಶ ನೀಡಬೇಕು. ಘಾಟಿ ಸಮೀಪದ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮಿನ ಎತ್ತರವನ್ನು ಮತ್ತಷ್ಟು ಎತ್ತರಿಸಿ ಕುಡಿಯುವ ನೀರಿಗೆ ಬಳಸಿಕೊಳ್ಳುವ ಯೋಜನೆ ರೂಪಿಸಿಲು ಮನವಿ ಮಾಡಲಾಗಿದೆ. ನೂತನ ಅಂಗಡಿ ಮಳಿಗೆಗಳನ್ನು ಸರ್ಕಾರದ ನಿಯಮಗಳ ಪ್ರಕಾರ ಹರಾಜು ಮಾಡಬೇಕಾಗಿದ್ದು, ಸ್ಥಳೀಯರಿಗೆ ಆದ್ಯತೆ ನೀಡಲು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ಟಿಎಪಿಎಂಸಿ ಅಧ್ಯಕ್ಷ ಡಿ.ಸಿದ್ದರಾಮಯ್ಯ,ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಂ ಯಶೋದಮ್ಮ, ತಾಲ್ಲೂಕು ಸದಸ್ಯೆ ಮಂಜುಳವೆಂಕಟೇಶ್,ತೆಂಗಿನ ನಾರಿನ ಸಹಕಾರ ಮಂಡಳಿ ಅಧ್ಯಕ್ಷ ಎಸ್.ಎಲ್ ವೆಂಕಟೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಾಸದೇವ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ, ಎಪಿಎಂಸಿ ನಿರ್ದೇಶಕ ಸೋಮಣ್ಣ,ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನಮ್ಮ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.