ಹೊಸಕೋಟ: ‘ಡಿಜಿಟಲ್ ಡಿವೈಡ್’ ಎಂಬ ಹೊಸ ಅಸಮಾನತೆ ಸೃಷ್ಟಿಯಾಗಿದೆ. ಎಲ್ಲರಿಗೂ ಕಂಪ್ಯೂಟರ್ ದೊರಕುತ್ತಿಲ್ಲ. ದೊರಕಿದರೂ ಇಂಟರ್‌ನೆಟ್ ಸೌಲಭ್ಯ ದೊರಕುತ್ತಿಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಮಲಿಂಗಪ್ಪ ಟಿ. ಬೇಗೂರು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಲೋಕಾರ್ಪಣೆ, ಉಚಿತ ಪುಸ್ತಕ ವಿತರಣೆ ಮತ್ತ್ ಸಾಫ್ಟ್ ಸ್ಕಿಲ್ಸ್ ಅರಿವು ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.
ಮೊಬೈಲ್ ಎಂಬ ಮಾಯೆ ಎಲ್ಲರನ್ನು ಆವರಿಸಿದ್ದರೂ ಕೆಲವರಿಗೆ ಟವರ್ ಸಿಗ್ನಲ್ ದೊರಕದೆ, ಇಂಟರ್ನೆಟ್ ಸೌಲಭ್ಯವೂ ದೊರಕದೆ ಆಧುನಿಕ ಸಂಪರ್ಕ ಕ್ರಾಂತಿಯಿಂದ ದೂರ ಉಳಿದಿದ್ದಾರೆ. ಎಷ್ಟೊ ಮಂದಿಗೆ ಇಂದು ಕ್ಲೌಡ್ ಕಂಪ್ಯೂಟಿಂಗ್ ಅಂದರೆ ಏನೆಂದೇ ಗೊತ್ತಿಲ್ಲ, ಎ.ಐ ಎಂದರೆ ಏನೆಂದೇ ಗೊತ್ತಿಲ್ಲ ಎಂದರು.
ಕಂಪ್ಯೂಟರ್ ಬಳಸಲು ಬಲ್ಲವರು ಮತ್ತು ತಿಳಿದಿಲ್ಲದವರು ಎಂಬಂತೆ ನಮ್ಮ ಸಮಾಜ ಒಡೆದುಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ‘ಡಿಜಿಟಲ್ ಡಿವೈಡ್’ ಎಂಬ ಹೊಸ ಅಸಮಾನತೆ ಅನುಭವಿಸುತ್ತಿದ್ದೇವೆ. ಇದನ್ನು ತೊಡೆದು ಹಾಕಲು ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲರಿಗೂ ಕಂಪ್ಯೂಟರ್ ಮತ್ತು ವಿವಿಧ ಬಗೆಯ ತಂತ್ರಾಂಶಗಳು ಉಚಿತವಾಗಿ ದೊರಕಬೇಕಾದ ಅಗತ್ಯವಿದೆ ಎಂದು ಹೇಳಿದರು.
ರಾಜಾಸ್ಥಾನ್ ಯುವ ಸಂಘಟನೆ ಟ್ರಸ್ಟ್ ಅಧ್ಯಕ್ಷ ರಾಜೇಶ್ ಪಿ. ಶಾ, ‘ ₹1.50 ಲಕ್ಷ ಮೌಲ್ಯದ ಪುಸ್ತಕ ಹಾಗೂ 32 ಕಂಪ್ಯೂಟರ್‌ಗಳನ್ನು ರಾಜಾಸ್ಥಾನ್ ಯೂತ್ ಅಸೋಸಿಯೇಶನ್ (ಆರ್‌ವೈಎ) ಕೊಡುಗೆಯಾಗಿ ನೀಡಿದೆ.ಗ್ರಾಮೀಣ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು’ ಎಂದರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಯೋಜಕಿ ಡಾ.ಜೆ. ಲತಾ, ಐಕ್ಯುಎಸಿ ಸಂಚಾಲಕ ಡಾ. ವಿಶ್ವೇಶ್ವರಯ್ಯ, ಅಧ್ಯಾಪಕ ಕಾರ್ಯದರ್ಶಿ ಅಮೃತಮ್ಮ, ಈರಣ್ಣ, ಕಾವಲಯ್ಯ, ಯತಿರಾಜ್, ಶರಣಬಸಪ್ಪ, ರಮ್ಯ ಇದ್ದರು.
ಹೊಸಕೋಟೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.