ADVERTISEMENT

ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ

ಡಿ.27ರಂದು ವೆಬ್‍ಸೈಟ್ ಅನಾವರಣ: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 14:09 IST
Last Updated 16 ಡಿಸೆಂಬರ್ 2019, 14:09 IST
ಹಿರಿಯ ಯಕ್ಷಗಾನ ಕಲಾವಿದ ಎಸ್.ಸಿ.ಜಗದೀಶ್ ಅವರಿಗೆ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಪ್ರಶಸ್ತಿ ಪ್ರದಾನ ಮಾಡಿದರು
ಹಿರಿಯ ಯಕ್ಷಗಾನ ಕಲಾವಿದ ಎಸ್.ಸಿ.ಜಗದೀಶ್ ಅವರಿಗೆ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಪ್ರಶಸ್ತಿ ಪ್ರದಾನ ಮಾಡಿದರು   

ದೊಡ್ಡಬಳ್ಳಾಪುರ: ಯಕ್ಷಗಾನ ಕಲೆ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಅಕಾಡೆಮಿ ವತಿಯಿಂದ ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಡಿ.27ರಂದು ವೆಬ್‍ಸೈಟ್ ಅನಾವರಣಗೊಳಿಸಲಾಗುವುದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ತಿಳಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ 2018ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿರುವ ನಗರದ ಯಕ್ಷಗಾನ ಕಲಾವಿದ ಎಸ್.ಸಿ.ಜಗದೀಶ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸೋಮವಾರ ಅವರ ನಿವಾಸಕ್ಕೆ ಭೇಟಿ ನೀಡಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಹಲವು ಯಕ್ಷಗಾನ ಪ್ರಸಂಗ ಇಂದು ಕಾಣದೆ ಹೋಗುತ್ತಿದ್ದೇವೆ. ಈನಿಟ್ಟಿನಲ್ಲಿ ಯಕ್ಷಗಾನ ಕೃತಿ, ಪ್ರಸಂಗ, ವೆಬ್‍ಸೈಟ್‍ಗೆ ಅಳವಡಿಸಲಾಗಿದೆ. ಇದರಲ್ಲಿ ಸುಮಾರು 8 ಸಾವಿರ ಪ್ರಸಂಗಗಳನ್ನು ಉಚಿವಾಗಿ ವೀಕ್ಷಣೆ ಮಾಡಬಹುದಾಗಿದೆ. ಮೂಡಲಪಾಯ ಯಕ್ಷಗಾನಕ್ಕೂ ಹೆಚ್ಚಿನ ಉತ್ತೇಜನ ನೀಡುವಲ್ಲಿ ಅಕಾಡೆಮಿ ವತಿಯಿಂದ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ತಾಳಮದ್ದಲೆಯಂತೆ ಮೂಡಲಪಾಯಕ್ಕೆ ಅನ್ವಯವಾಗುವಂತೆ ತಾಳಮೇಳ ಕಾರ್ಯಕ್ರಮ ರೂಪಿಸಲಾಗಿದೆ. ತಾಳಮೇಳ ಆಯೋಜಿಸುವ ಸಂಸ್ಥೆಗಳಿಗೆ ಸಹಾಯಧನ ನೀಡಲಾಗುತ್ತಿದೆ. ಹಿಂದಿನ ಸಾಲಿನ ಕಾರ್ಯಕ್ರಮದೊಂದಿಗೆ ನೂತನ ಕಾರ್ಯಕ್ರಮಕ್ಕೆ ಮುಂದಿನ ಬಜೆಟ್‍ ಅನುದಾನದ ಅನ್ವಯ ಅಕಾಡೆಮಿಯಿಂದ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ADVERTISEMENT

ರಂಗ ಪ್ರದರ್ಶನಕ್ಕೆ ಆದ್ಯತೆ: ಹಿರಿಯರ ನೆನಪು ಕಾರ್ಯಕ್ರಮದಲ್ಲಿ ತೆರೆಮೆರೆ ಸಾಧಕರನ್ನು ಗುರುತಿಸಲಾಗುವುದು. ಯಕ್ಷಗಾನ ಕಲೆ ಎಷ್ಟು ಬಾರಿ ಮಾಡಿದರೂ ರಂಗದ ಹಿಡಿತ ಬರಬೇಕಾದರೆ ಹಲವು ಬಾರಿ ಪ್ರದರ್ಶಿಸಲೇಬೇಕಿದೆ. ಈ ದಿಸೆಯಲ್ಲಿ ರಂಗಸ್ಥಳದ ಅವಕಾಶ ಮಾಡಿಕೊಡುವುದು ಅಗತ್ಯವಾಗಿದೆ. ಮೂಡಲಪಾಯ ಯಕ್ಷಗಾನಕ್ಕೂ ತನ್ನದೇ ಸ್ಥಾನವಿದೆ. ಈ ಪ್ರಕಾರವನ್ನು ಪ್ರದರ್ಶಿಸುವ ಕಲಾವಿದರ ವೇಷಭೂಷಣ, ಭಾಗವತಿಕೆ, ರಂಗಸಜ್ಜಿಕೆ ಇವುಗಳ ವೈಶಿಷ್ಟ್ಯ ಹೇಗಿದೆಯೋ ಹಾಗೆಯೇ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಇಲ್ಲವಾದಲ್ಲಿ ಇದು ನಾಟಕವೆನಿಸಿಕೊಳ್ಳುತ್ತದೆ. ಸಾಂಪ್ರದಾಯಿಕತೆ ಉಳಿಸಿಕೊಂಡು ಇಂದಿನ ಅಗತ್ಯಗಳಿಗೆ ತಕ್ಕಂತೆ ಪ್ರದರ್ಶನ ನೀಡಬೇಕಿದೆ ಎಂದರು.

ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್.ಪ್ರಭುದೇವ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಹಲವು ಮಂದಿ ಕಲಾವಿದರಿದ್ದಾರೆ. ಯಕ್ಷಗಾನ ತಂಡಗಳು ಸಾಕಷ್ಟಿವೆ. ಜಗದೀಶ್ ಅವರು ಯಕ್ಷಗಾನ ಕಲೆಯಲ್ಲಷ್ಟೇ ಅಲ್ಲದೇ ಗಾಳಿಪಟ ತಯಾರಿಸುವಲ್ಲಿಯೂ ಸಿದ್ಧಹಸ್ತರು. ಜಾನಪದ ತಜ್ಞ ಎಚ್.ಎಲ್.ನಾಗೇಗೌಡ ಅವರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಸದಸ್ಯ ಶ್ರೀನಿವಾಸ್‌ ಸಾಸ್ತಾನ್, ಮಾಜಿ ಸದಸ್ಯ ಕೆ.ಸಿ.ನಾರಾಯಣ್, ಯದ್ಲಳ್ಳಿ ಪಾಪಣ್ಣನವರ ಯಕ್ಷಗಾನ ಮಂಡಲಿ ಅಧ್ಯಕ್ಷ ವೈ.ಎಸ್.ಭಾಸ್ಕರ್ ಸೇರಿದಂತೆ ಯಕ್ಷಗಾನ ಮಂಡಲಿ ಕಲಾವಿದರು, ಗಾಳಿಪಟ ಕಲಾ ಸಂಘದ ಸದಸ್ಯರು, ‌ಕಲಾವಿದ ಎಸ್.ಸಿ.ಜಗದೀಶ್ ಕುಟುಂಬದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.