ADVERTISEMENT

ಹೊಸಕೋಟೆ: ಶರತ್‌ ಬಚ್ಚೇಗೌಡ ವಿರುದ್ಧ ಭಿನ್ನಮತ ಸ್ಫೋಟ

ಹೊಸಕೋಟೆ: ಪಕ್ಷದ ಸಭೆಯಲ್ಲಿ ಶಾಸಕರ ನಡೆಗೆ ಮೂಲ ಕಾಂಗ್ರೆಸ್ಸಿಗರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 19:22 IST
Last Updated 8 ಡಿಸೆಂಬರ್ 2022, 19:22 IST
ಹೊಸಕೋಟೆಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ವಾಗ್ವಾದದಲ್ಲಿ ತೊಡಗಿರುವುದು
ಹೊಸಕೋಟೆಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ವಾಗ್ವಾದದಲ್ಲಿ ತೊಡಗಿರುವುದು   

ಹೊಸಕೋಟೆ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕೆಪಿಸಿಸಿ ಕಾರ್ಯದರ್ಶಿ ಮುನಿಶಾಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಅವರ ಬೆಂಬಲಿಗರ ವಿರುದ್ಧ ಮೂಲ ಕಾಂಗ್ರೆಸ್ಸಿಗರ ಅಸಮಾಧಾನ ಸ್ಫೋಟಗೊಂಡಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದವೂ ನಡೆಯಿತು. ಮುನಿಶಾಮಣ್ಣ ವಿರುದ್ಧವೂ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಲು ಅಸಹಾಯಕರಾದರು.

ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಆರಂಭದಲ್ಲಿಯೇ ‘ಶಾಸಕ ಶರತ್ ಬಚ್ಚೇಗೌಡ ಮತ್ತು ಬೆಂಬಲಿಗರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ ಎಂದು ಮೂಲ ಕಾಂಗ್ರೆಸ್ಸಿಗರು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘ಪಕ್ಷದ ಸಭೆಗಳಿಗೆ ನಮ್ಮನ್ನು ಕರೆಯುತ್ತಿಲ್ಲ. ನಮ್ಮ ಗಮನಕ್ಕೆ ತಾರದೆ ತಾಲ್ಲೂಕಿನ ಅನುಗೊಂಡನಹಳ್ಳಿಯಲ್ಲಿ ಹೋಬಳಿ ಮಟ್ಟದ ಕಾಂಗ್ರೆಸ್ ಕಚೇರಿ ಪ್ರಾರಂಭಿಸಿದ್ದಾರೆ. ಅದು ಅನುಗೊಂಡನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಕೈ, ಕೈ ಮಿಲಾಯಿಸುವ ಹಂತಕ್ಕೆತಲುಪಿದಾಗ ಹಿರಿಯ ಮುಖಂಡರು ಸಮಾಧಾನ‍ಪಡಿಸಿದರು.

‘ಇನ್ನು ಶರತ್‌ ಬೆಂಬಲಿಗರು ಪಕ್ಷದ ಸದಸ್ಯರಾಗಿಲ್ಲ. ಒಮ್ಮೆಯೂ ಕಾಂಗ್ರೆಸ್‌ಗೆ ಮತ ಹಾಕದವರಿಗೆ ಪದಾಧಿಕಾರಿಗಳ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿದ್ದ ವೇಳೆ ಮುನಿಶಾಮಣ್ಣ ತಮಗೆ ಇಷ್ಟ ಬಂದ ರೀತಿಯಲ್ಲಿ ಹುದ್ದೆ ನೀಡಿದ್ದಾರೆ. ಈ ಬಗ್ಗೆ ಬ್ಲಾಕ್ ಅಧ್ಯಕ್ಷರ ಗಮನಕ್ಕೂ ತಂದಿಲ್ಲ’ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿಮಾಜಿ ಅಧ್ಯಕ್ಷ ಪ್ರಸಾದ್ ಮಾತನಾಡಿ, ‘ಇತ್ತೀಚಿನ ತಾಲ್ಲೂಕು ಕಾಂಗ್ರೆಸ್ ಬೆಳವಣಿಗೆ ಬಗ್ಗೆ ನನಗೂ ಅಸಮಾಧಾನವಿದೆ. ಅದಕ್ಕಾಗಿಯೇ ತಾವು ಕಳೆದ ಎರಡು ವರ್ಷಗಳಿಂದ ಯಾವುದೇ ಸಭೆಗಳಿಗೆ ಹಾಜರಾಗಿಲ್ಲ’ ಎಂದರು.

‘ನನ್ನ ಬಗ್ಗೆಯೂ ಜಿಲ್ಲಾ ಅಧ್ಯಕ್ಷರು ಆರೋಪ ಮಾಡಿದ್ದಾರೆ. ಶರತ್ ಬಚ್ಚೇಗೌಡ ಮತ್ತು ಬೆಂಬಲಿಗರು ಅವರ ಅನುಕೂಲಕ್ಕಾಗಿ ಪಕ್ಷಕ್ಕೆ ಬಂದಿದ್ದಾರೆ. ನಮ್ಮ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೊಂದಾಣಿಕೆಯಿಂದ ಗೆದ್ದ ಅವರು ಮೂಲ ಕಾಂಗ್ರೆಸ್ಸಿಗರನ್ನು ಯಾವುದೇ ಪಂಚಾಯಿತಿಯ ಅಧ್ಯಕ್ಷರನ್ನಾಗಿ ಮಾಡಿಲ್ಲ’ ಎಂದು ಆರೋಪಿಸಿದರು.

‘ಶಾಸಕರು ಸ್ವತಂತ್ರವಾಗಿ ಗೆದ್ದಿದ್ದು ಅವರ ಮಾತಿಗೆ ವಿಧಾನಸೌಧದಲ್ಲಿ ಯಾವುದೇ ಬೆಲೆಯಿಲ್ಲ. ಅವರು ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕಾಂಗ್ರೆಸ್ ಸಹ ಸದಸ್ಯರಾದ ಮೇಲೆ ಅವರ ಮಾತುಗಳಿಗೆ ಅಧಿವೇಶನದಲ್ಲಿ ಬೆಂಬಲ ದೊರೆಯುತ್ತಿದೆ. ಅದನ್ನು ಅರಿತು ಮುಂದಿನ ದಿನಗಳಲ್ಲಿ ಮೂಲ ಕಾಂಗ್ರೆಸ್ಸಿಗರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುತ್ತವೆ’ ಎಂದು ಎಚ್ಚರಿಸಿದರು.

‘ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದಿದ್ದರೆ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದರು. ಕೆಲವು ಕಾಂಗ್ರೆಸ್ ಸದಸ್ಯರೇ ಶರತ್ ಬಚ್ಚೇಗೌಡರಿಗೆ ಸಹಾಯ ಮಾಡಿದ್ದರಿಂದ ಅವರು ಶಾಸಕರಾಗಿದ್ದು, ಈಗ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತಿದ್ದಾರೆ.ಇದರಿಂದ ಬೇಸತ್ತ ಹಲವು ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ’ ಎಂದುನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಕುಮಾರ್‌
ಆರೋಪಿಸಿದರು.

ಹೊಂದಾಣಿಕೆ ಸರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಜನರು ಕಾಂಗ್ರೆಸ್ ತೊರೆದು ಬೇರೆ ಪಕ್ಷಗಳಿಗೆ ಸೇರುತ್ತಾರೆ. ಇದರಿಂದ ತಾಲ್ಲೂಕಿನಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಎಚ್ಚರಿಸಿದರು. ಕೂಡಲೇ ಹೈಕಮಾಂಡ್ ಪರಿಸ್ಥಿತಿಯನ್ನು ಸರಿಪಡಿಸಬೇಕು. ಮುಂದಿನ ಚುನಾವಣೆಯಲ್ಲಿ ಮೂಲ ಕಾಂಗ್ರೆಸ್ಸಿಗರಾದ ಮುನಿಶಾಮಣ್ಣ ಅಥವಾ ಪ್ರಸಾದ್‌ಗೆ ಪಕ್ಷದಿಂದ ಟಿಕೆಟ್ ನೀಡಬೇಕು. ಆಗ ಕಾರ್ಯಕರ್ತರು ಒಟ್ಟಿಗೆ ನಿಂತು ಅವರನ್ನು ಗೆಲ್ಲಿಸುತ್ತೇವೆ ಎಂದು ಘೋಷಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಮುನಿಶಾಮಣ್ಣ ಪ್ರತಿಕ್ರಿಯಿಸಿ, ‘ಶೀಘ್ರವೇ, ಮತ್ತಷ್ಟು ಕಾರ್ಯಕರ್ತರನ್ನು ಸೇರಿಸಿ ಸಭೆ ನಡೆಸಲಾಗುವುದು. ಆಗ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ’ ಎಂದರು. ಸಭೆಯಲ್ಲಿ ಮುಖಂಡರಾದ ಕೃಷ್ಣಾರೆಡ್ಡಿ, ಸಗೀರ್‌ ಅಹಮದ್, ಬಚ್ಚೇಗೌಡ, ಕಲ್ಲಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.