ADVERTISEMENT

ಶೀಘ್ರ ಜಿಲ್ಲಾ ಕೇಂದ್ರ ಸ್ಥಾನ ಘೋಷಣೆ

ಜನರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ: ಸಚಿವ ಆರ್.ಅಶೋಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 3:53 IST
Last Updated 14 ಫೆಬ್ರುವರಿ 2021, 3:53 IST
ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ ಮಾತನಾಡಿದರು
ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ ಮಾತನಾಡಿದರು   

ದೊಡ್ಡಬಳ್ಳಾಪುರ: ಒಂದು ತಿಂಗಳೊಳಗೆ ಜಿಲ್ಲಾ ಕೇಂದ್ರದ ಸ್ಥಾನ ಯಾವುದು ಎನ್ನುವುದನ್ನು ಘೋಷಿಸಲಾಗುವುದು ಎಂದು ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಗರಕ್ಕೆ ಮಂಜೂರಾಗಿರುವ ಜಿಲ್ಲಾ ಆಸ್ಪತ್ರೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕದಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಜಿಲ್ಲಾ ಕೇಂದ್ರ ಘೋಷಣೆಯಾಗದ ಕಾರಣ ಅನುಮೋದನೆಯಾಗಿಲ್ಲ. ಜಿಲ್ಲೆಯ ಜನರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ನಗರಕ್ಕೆ ಮಂಜೂರಾಗಿದ್ದ ಅನುದಾನ ತಡೆದಿರುವ ಕುರಿತು ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಟಿ.ಬಿ.ನಾಗಾರಾಜ್, ಅಶೋಕ್ ನಗರೋತ್ಥಾನ ಯೋಜನೆಯಡಿ ಮೊದಲ ಹಂತದ ಕಾಮಗಾರಿ ನಡೆದಿದೆ. ಮುಂದಿನ ಹಂತ ಬಿಡುಗಡೆಯಾಗಲಿದೆ. ಈಗ ಬಿಡುಗಡೆಯಾಗಿರುವ ಶಾಸಕರ ಅನುದಾನ ಬಳಸದೆ ಎರಡನೇ ಹಂತದ ಹಣ ಕೇಳುವುದು ಸರಿಯಲ್ಲ. ಮೊದಲು ಬಿಡುಗಡೆಯಾದ ಹಣ ಬಳಕೆ ಮಾಡಿ ನಂತರ ಸರ್ಕಾರ ವಿರುದ್ಧ ಮಾತನಾಡಲಿ ಎಂದು ಅವರು ಹೇಳಿದರು.

ADVERTISEMENT

ಬೆಲೆ ಏರಿಕೆ ಸಮರ್ಥನೆ: ಅಂತರ ರಾಷ್ಟ್ರೀಯ ಮಾರುಕಟ್ಟೆ ದರದ ಏರಿತದ ಕಾರಣ ಪೆಟ್ರೋಲ್ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಕೊರೊನಾದಿಂದ ಉಂಟಾದ ಆರ್ಥಿಕ ಅವ್ಯವಸ್ಥೆ ಸರಿದೂಗಿಸಲು ತೆರಿಗೆ ಅನಿವಾರ್ಯ ಎಂದರು.

ಕಾಂಗ್ರೆಸ್ ಕುಟುಂಬದ ಬಜೆಟ್ ಅಲ್ಲ: ಕೊರೊನಾದಿಂದ ಉಂಟಾದ ಆರ್ಥಿಕ ಅಸಮತೋಲನದಿಂದ ಪಾಕಿಸ್ತಾನ ಸೇರಿದಂತೆ ಇತರ ದೇಶಗಳು ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ. ಆದರೆ, ಭಾರತ ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೂ ಪ್ರಧಾನ
ಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಬಜೆಟ್ ನೀಡಿದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸರ್ಕಾರದ ಜನಪರ, ಪಾರದರ್ಶಕ, ಹಗರಣ ರಹಿತ ಆಡಳಿತ ನೀಡುತ್ತಿರುವುದರಿಂದ ಆರು ವರ್ಷದಿಂದ ವಿರೋಧಿಸಲು ಅವಕಾಶ ಸಿಗದೆ. ಬಜೆಟ್ ಕುರಿತು ಅವಹೇಳನ ಮಾಡುವ ಕೆಲಸಕ್ಕೆ ಇಳಿದಿದೆ ಎಂದು ಅವರು ಹೇಳಿದರು.

ಕೊರೊನಾ ಕಷ್ಟದಲ್ಲಿ ಬಡಜನರ, ರೈತ ಪರ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು, ರಾಜ್ಯ ಬಜೆಟ್‌ಗೆ ಪೂರಕ ಬಜೆಟ್ ಆಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿನ ತಿಂಗಳ ಅಧಿವೇಶನದಲ್ಲಿ ಇದೇ ಮಾದರಿಯಲ್ಲಿ ಬಜೆಟ್ ನೀಡಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಕಾರ್ಯಕಾರಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಗೋವಿಂದರಾಜು,ವಕ್ತಾರರಾದ ಪುಷ್ಪಾಶಿವಶಂಕರ್, ಶಿವಾನಂದರೆಡ್ಡಿ, ಬಿಜೆಪಿ ನಗರ ಅಧ್ಯಕ್ಷ ಎಚ್‌.ಎಸ್‌.ಶಿವಶಂಕರ್‌,ತಾಲ್ಲೂಕು ಅಧ್ಯಕ್ಷ ನಾಗರಾಜ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.