ADVERTISEMENT

ಮೂಕ ಪ್ರಾಣಿಗಳಿಗೆ ನೀರುಣಿಸುವ ಕಾರ್ಯ ಮಾಡಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 9:01 IST
Last Updated 25 ಫೆಬ್ರುವರಿ 2020, 9:01 IST
ನಂದಿ ತಪ್ಪಲಿನಲ್ಲಿ ಹೋರಾಟಗಾರ ಬಿ.ಕೆ.ಶಿವಪ್ಪ ಅವರು ಗಿಡಗಳಲ್ಲಿ ಬಾಟಲಿಗಳು ಕಟ್ಟುತ್ತಿರುವುದು
ನಂದಿ ತಪ್ಪಲಿನಲ್ಲಿ ಹೋರಾಟಗಾರ ಬಿ.ಕೆ.ಶಿವಪ್ಪ ಅವರು ಗಿಡಗಳಲ್ಲಿ ಬಾಟಲಿಗಳು ಕಟ್ಟುತ್ತಿರುವುದು   

ವಿಜಯಪುರ: ಬಿಸಿಲಿನ ಬೇಗೆ ಹೆಚ್ಚಾಗಿ ನೀರಿಗೆ ಹಾಹಾಕಾರ ಉಂಟಾಗಿದೆ. ಮನುಷ್ಯರು ಮಾತ್ರವಲ್ಲ ಪ್ರಾಣಿ –ಪಕ್ಷಿ ಸಂಕುಲವೂ ಪರದಾಡಬೇಕಾದ ಸ್ಥಿತಿ ಇದೆ. ಜನರು ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಮಾಡಬೇಕೆಂದು ಹೋರಾಟಗಾರ ಬಿ.ಕೆ.ಶಿವಪ್ಪ ಮನವಿ ಮಾಡಿದರು.

ನಂದಿ ತಪ್ಪಲಿನಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರುಣಿಸಲು ಬಾಟಲಿಗಳನ್ನು ಕಟ್ಟಿ ನೀರು ಹಾಕುವ ಕಾಯಕ ಅವರು ಕೈಗೊಂಡಿದ್ದಾರೆ. ಜಲಮೂಲಗಳು, ಕೆರೆ –ಕಟ್ಟೆಗಳು ಬರಿದಾಗುತ್ತಿವೆ. ಪ್ರಾಣಿ –ಪಕ್ಷಿಗಳು ಬಿಸಿಲಿನ ಬೇಗೆ ತಾಳಲಾರದೆ ನಿತ್ರಾಣಗೊಂಡು ಸಾವನ್ನಪ್ಪುತ್ತಿವೆ. ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಜಲದಾಹಕ್ಕೆ ಮೂಕಜೀವಿಗಳ ರೋದನೆಯೂ ಹೆಚ್ಚಾಗಿದೆ. 6 ವರ್ಷದಿಂದ ಬರಗಾಲ ಎದುರಿಸುತ್ತಿರುವ ಜಿಲ್ಲೆಯಲ್ಲಿ ಈ ಬಾರಿಯೂ ಪರಿಸ್ಥಿತಿ ಗಂಭೀರವಾಗಿದೆ. ಸುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟಕುಸಿದು ನೀರಿಗೆ ಹಾಹಾಕಾರ ಉಂಟಾಗಿ ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರು ಪೂರೈಸುವಂತಾಗಿದೆ ಎಂದು ಆತಂಕ ವ್ಯಕ್ತ‍ಪಡಿಸಿದರು.

ನೀರುಣಿಸುವ ಅಭಿಯಾನ: ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶಗಳಲ್ಲಿ ಪ್ರಾಣಿ – ಪಕ್ಷಿಗಳ ಸಂಖ್ಯೆ ಹೆಚ್ಚಳ ಇರುವ ಕಡೆ ನೀರಿನ ತೊಟ್ಟಿ ನಿರ್ಮಿಸಿ ನೀರುಣಿಸುವ ಅಭಿಯಾನ ಕೈಗೊಳ್ಳಬೇಕು. ಪ್ರಾಣಿ – ಪಕ್ಷಿಗಳಿಗೆ ಅನುಕೂಲವಾಗುವಂತೆ ಇದನ್ನು ನಿರ್ಮಿಸಬೇಕೆಂದು ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.

ADVERTISEMENT

ಉಷ್ಣಾಂಶ ಹೆಚ್ಚಳ: ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಬಿಸಿಲಿನ ದಾಹ ನೀಗಿಸಿಕೊಳ್ಳಲು ಜನರು ಎಳನೀರು, ತಂಪು ಪಾನಿಯ, ಕಲ್ಲಂಗಡಿ, ಐಸ್‌ಕ್ರೀಮ್ ಮೊರೆ ಹೋಗುತ್ತಿದ್ದಾರೆ. ಮೂಕಜೀವಿಗಳ ನೋವು ಕೇಳುವವರಿಲ್ಲ. ಪ್ರಜ್ಞಾವಂತ ನಾಗರಿಕರು ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.