ADVERTISEMENT

ದೊಡ್ಡಬಳ್ಳಾಪುರ: ಅಯ್ಯಪ್ಪ ದೇಗುಲ ಹುಂಡಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 16:02 IST
Last Updated 5 ಏಪ್ರಿಲ್ 2025, 16:02 IST
​ದೊಡ್ಡಬಳ್ಳಾಪುರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕಳ್ಳತನವಾಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು
​ದೊಡ್ಡಬಳ್ಳಾಪುರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕಳ್ಳತನವಾಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು   

ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್‌ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಹುಂಡಿ ಕಳ್ಳತನವಾಗಿದೆ.

ದೇವಾಲಯದ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳನೊಬ್ಬ, ಮುಖ್ಯ ಬಾಗಿಲ ಬಳಿಯ ಸಿಸಿಟಿವಿ ಕ್ಯಾಮೆರಾ ನಿಯಂತ್ರಣ ಕೊಠಡಿಗೆ ತೆರಳಿ, ಕ್ಯಾಮೆರಾ ಸಂಪರ್ಕ ಕಡಿತ ಮಾಡಿದ್ದಾನೆ. ರಾತ್ರಿ 1 ಗಂಟೆ ವೇಳೆ ಮುಖ ಕಾಣದಂತೆ ಮೈ ತುಂಬಾ ಬಟ್ಟೆ ಹೊದ್ದಿಕೊಂಡು ಬಂದಿರುವ ಕಳ್ಳನ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದೇವಾಲಯದಲ್ಲಿನ ಮೂರು ಹುಂಡಿಗಳನ್ನು ಹೊಡೆಯಲಾಗಿದ್ದು, ಮತ್ತೊಂದು ಹುಂಡಿಯನ್ನು ಎತ್ತಿಕೊಂಡು ಹೋಗಿದ್ದಾನೆ. ನಾಪತ್ತೆಯಾಗಿರುವ ಹುಂಡಿ ದೇವಾಲಯದ ಸುತ್ತಮುತ್ತ ಎಲ್ಲೂ ಪತ್ತೆಯಾಗಿಲ್ಲ. ಉಳಿದಂತೆ ದೇವಾಲಯದಲ್ಲಿನ ಗರ್ಭಗುಡಿಯ ಬಾಗಿಲು ಸಹ ಹೊಡೆಯಲಾಗಿದ್ದು, ಇಲ್ಲಿನ ಹುಂಡಿ ಸೇರಿದಂತೆ ಬೆಲೆ ಬಾಳುವ ಲೋಹದ ವಸ್ತುಗಳು ಇನ್ನಿತರೆ ವಸ್ತುಗಳು ಕಳುವಾಗಿಲ್ಲ. ಕಳೆದ ಫೆಬ್ರವರಿಯಲ್ಲಿ ಹುಂಡಿ ಹಣ ಎಣಿಸಲಾಗಿದ್ದು, ಇತ್ತೀಚೆಗೆ ದೇವಾಲಯದಲ್ಲಿ ಅಂತಹ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯದಿದ್ದ ಕಾರಣ ಹುಂಡಿಯಲ್ಲಿ ಕಡಿಮೆ ಹಣ ಸಂಗ್ರಹವಾಗಿತು ಎನ್ನಲಾಗಿದೆ.

ADVERTISEMENT

ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ದೇವಾಲಯವು ಡಿ.ಕ್ರಾಸ್‌ ಮುಖ್ಯರಸ್ತೆಯ ಬದಿಯಲ್ಲಿಯೇ ಇದ್ದು, ಸುತ್ತ ವಸತಿ ಪ್ರದೇಶ ಇದೆ. ಸಮೀಪದಲ್ಲೇ ನಗರ ಪೊಳೀಸ್‌ ಠಾಣೆಯು ಸಹ ಇದೆ. ಇಲ್ಲಿಯೇ ಕಳ್ಳತನವಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಪೊಲೀಸ್‌ ಬೀಟ್‌ ವ್ಯವಸ್ಥೆ ಬಿಗಿಗೊಳಿಸೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.