ದೊಡ್ಡಬಳ್ಳಾಪುರ: ಹಾಲಿನ ಉತ್ಪಾದನೆ ಹೆಚ್ಚಿಸಲು, ಹೊಸದಾಗಿ ಹಸು ಖರೀದಿಸಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರನ್ನು ಪ್ರೋತ್ಸಾಹಿಸಲು ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಲ್ಲಿ 25 ರೈತರಿಗೆ ಶೇ 3ರ ಬಡ್ಡಿದರದಲ್ಲಿ ₹1.60 ಲಕ್ಷದಿಂದ ₹15 ಲಕ್ಷದವರೆಗೂ ಸಾಲ ನೀಡುವ ಚಿಂತನೆ ನಡೆಸಲಾಗಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ನಗರದ ಹಾಲು ಶೀಥಲ ಕೇಂದ್ರದಲ್ಲಿ ಶುಕ್ರವಾರ ನಡೆದ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯನಿರ್ವಾಹಕರು ಹಾಗೂ ರೈತರ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.
‘ಬಮುಲ್ ಗ್ರಾಮೀಣ ಭಾಗದ ಜನರ ಆರ್ಥಿಕ ಪ್ರಗತಿಯ ಅಡಿಪಾಯವಾಗಿದೆ. ನಂದಿನಿ ಹಾಲು, ಇತರೆ ಉತ್ಪನ್ನಗಳು ಗುಣಮಟ್ಟದಲ್ಲಿ ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಬಂದಿದೆ. ಆದರೆ ವಿವಿಧ ಕಾರಣಗಳಿಂದ ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ ನೀಡದೆ, ಪ್ರತಿ ದಿನ 6 ಲಕ್ಷ ಲೀಟರ್ ಹಾಲನ್ನು ವಿವಿಧ ಉತ್ಪನ್ನಗಳಾಗಿ ಪರಿವರ್ತಿಸಲಾಗುತ್ತಿದೆ. ಹಾಲು ಉತ್ಪಾದನೆ ಹೆಚ್ಚಳ ಹಾಗೂ ಮಾರುಕಟ್ಟೆ ವಿಸ್ತರಣೆ ಎರಡನ್ನೂ ಸಮಾನವಾಗಿ ಅಭಿವೃದ್ಧಿಗೊಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಹೈನುಗಾರಿಕೆಯಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರಿಗೆ ಸ್ವ ಉದ್ಯೋಗ ದೊರೆಯಲಿದೆ’ ಎಂದು ತಿಳಿಸಿದರು.
ಬಮುಲ್ ಮೆಗಾ ಡೇರಿಯನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಇತರೆ ತಾಲ್ಲೂಕುಗಳಿಗೆ ಬಮುಲ್‌ನಿಂದ ಯಾವುದೇ ಅನುಕೂಲ ಆಗಿಲ್ಲ ಎನ್ನುವ ಆರೋಪ ಸುಳ್ಳು. ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿಯವರೆಗೂ ಬಮುಲ್ ಅಭಿವೃದ್ಧಿಗೆ ಅಡ್ಡಿಯಾಗಿದೆ. ಕನಕಪುರದಲ್ಲಿ 50 ಎಕರೆ ಪ್ರದೇಶದಲ್ಲಿ ಆಧುನಿಕ ಮೆಗಾ ಡೇರಿ ಸ್ಥಾಪನೆ ಮಾಡದಿದ್ದರೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಹಾಗೂ ಹಾಲು ಉತ್ಪಾದನೆ ಹೆಚ್ಚಾದ ಸಮಯದಲ್ಲಿ ರೈತರು ಹಾಲನ್ನು ಚರಂಡಿಗೆ ಸುರಿಯುವ ಪ್ರಸಂಗ ಬರುತಿತ್ತು ಎಂದರು.
ರೈತರು ಎಷ್ಟೇ ಹಾಲು ಉತ್ಪಾದಿಸಿದರೂ ಖರೀದಿ ಮಾಡಿ ವಿವಿಧ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಇದೆ. ಬಮುಲ್ ಆಡಳಿತ ವೆಚ್ಚವನ್ನು ತಗ್ಗಿಸುವ ಕಡೆಗೂ ಗಮನ ನೀಡಲಾಗಿದೆ ಎಂದರು.
ಬಮೂಲ್ ನಿರ್ದೇಶಕ ಬಿ.ಸಿ.ಆನಂದಕುಮಾರ್, ತಾಲ್ಲೂಕಿನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಹಾಲಿನ ಟೆಟ್ರಾಪ್ಯಾಕ್ ಸೇರಿದಂತೆ ನಂದಿನಿಯ ಇತರೆ ಉತ್ಪನ್ನಗಳ ಘಟಕ ಸ್ಥಾಪನೆಗೆ 15 ಎಕರೆ ಜಮೀನು ಖರೀದಿಸಲಾಗಿದೆ. ಇದುವರೆಗೆ ಯಾವ ಕೆಲಸ ಆಗಿಲ್ಲ. ಜಾಗ ಖಾಲಿ ಬಿದ್ದಿದೆ. ಬಮುಲ್ ವತಿಯಿಂದ ಯಾವುದಾದರು ಒಂದು ಉತ್ಪನ್ನ ತಯಾರಿಕ ಘಟಕ ಸ್ಥಾಪನೆಗೆ ಅನುಮತಿ ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಮೂಲ್ ವ್ಯವಸ್ಥಾಪಕ ಡಾ.ಟಿ.ಸುರೇಶ್, ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ಕಡತನಮಲೆ ಸತೀಶ್, ಮುನಿರಾಜು, ಬೈರೇಗೌಡ, ಆರ್.ಕೆ.ರಮೇಶ್, ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ರಾಮಚಂದ್ರಬಾಬು,ಟಿಎಪಿಎಂಸಿಎಸ್ ನಿರ್ದೇಶಕ ವಿ.ಅಂಜಿನಗೌಡ,ಎಸ್.ಟಿ.ಆರ್.ಆರ್.ಸದಸ್ಯ ದೀಪು,ನೌಕರರ ಹಿತರಕ್ಷಣಾ ಸಮಿತಿ ಜಿಲ್ಲಾ ಅಧ್ಯಕ್ಷ ಲೋಕೇಶ್, ತಾಲ್ಲೂಕು ಅಧ್ಯಕ್ಷ ರವೀಂದ್ರಕುಮಾರ್ ಇದ್ದರು.
ರಿಯಾಯಿತಿ ದರದಲ್ಲಿ ಪಶು ಆಹಾರ ಮಾರಾಟ ಮಾಡಬೇಕು. ರಾಸು ಮಲಗಲು ನೀಡುವ ಕೌಮ್ಯಾಟ್‌ಗಳಿಗೆ ಸಬ್ಸಿಡಿ ಹೆಚ್ಚಿಸಬೇಕು. ಬಮುಲ್ ಸಿಬ್ಬಂದಿ ನೇಮಕಾತಿಯಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಪ್ರಥಮ ಆದ್ಯತೆ ನೀಡಬೇಕು. ರಾಸುಗಳು ಮರಣ ಹೊಂದಿದಾಗಿ ನೀಡಿರುವ ವಿಮಾ ಮೊತ್ತವನ್ನು ಕನಿಷ್ಠ ₹2 ಲಕ್ಷಕ್ಕೆ ಏರಿಸಬೇಕು. ಕಳಪೆ ಪಶು ಆಹಾರ ಉತ್ಪಾದನೆ ತಪ್ಪಿಸಲು ಉತ್ಪಾದನ ಘಟಕವನ್ನು ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿಗೆ ಒಳಪಡಿಸಬೇಕು. ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರನ್ನು ಬಮೂಲ್ ಸಿಬ್ಬಂದಿಯೆಂದು ಪರಿಗಣಿಸಬೇಕೆಂಬ ಇತ್ಯಾದಿ ಬೇಡಿಕೆಗಳನ್ನು ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಬಮೂಲ್ ಅಧ್ಯಕ್ಷರ ಗಮನಕ್ಕೆ ತಂದರು.
‘ಬಮೂಲ್ ನಿರ್ದೇಶಕರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಬಿ.ಸಿ.ಆನಂದಕುಮಾರ್ ನಮ್ಮ ಹುಡುಗ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಶುಕ್ರವಾರ ನಗರದಲ್ಲಿ ನಡೆದ ಸಭೆಯಲ್ಲಿ ಹೇಳಿರುವ ಮಾತು ತಾಲ್ಲೂಕಿನ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಬಿ.ಸಿ.ಆನಂದಕುಮಾರ್ ಸೇರಿದಂತೆ ಇತರೆ ಮುಖಂಡರು ಕಾಂಗ್ರೆಸ್ ತೊರೆದು ಹೋಗಿದ್ದರಿಂದಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣವಾಗಿತ್ತು ಎಂದೇ ವಿಶ್ಲೇಷಿಸಲಾಗಿತ್ತು. ಅಲ್ಲದೆ ಡಿ.ಕೆ.ಶಿವಕುಮಾರ್ ಅವರ ಅತ್ಯಾಪ್ತರ ಬಳಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು.
‘ಈ ಹಿಂದೆ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾಗ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರ ಹಾಗೂ ಸ್ಥಳೀಯ ಮುಖಂಡರ ಮನವಿಯಂತೆ ಕೆಎಂಎಫ್ ನಿರ್ದೇಶಕರಾಗಿಯುವ ಬಿ.ಸಿ.ಆನಂದಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. 2023ರ ವಿಧಾನ ಸಭಾ ಚುನಾಚವಣ ಸಂದರ್ಭದಲ್ಲಿ ಬೇರೆ ಪಕ್ಷದ ಕಡೆಗೆ ಹೋಗಿದ್ದಾರೆ. ಆದರೆ ಆನಂದ್‌ಕುಮಾರ್ ನಮ್ಮ ಹುಡುಗ. ಮುಂದಿನ ದಿಗಳಲ್ಲಿ ನಮ್ಮೊಂದಿಗೆ ಇರಲಿದ್ದಾರೆ’ ಎಂದು ಡಿ.ಕೆ.ಸುರೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.