ADVERTISEMENT

ದೊಡ್ಡಬಳ್ಳಾಪುರ | ಇ-ಪೌತಿ ಖಾತಾ ಆಂದೋಲನ: ರೈತರ ಅಲೆದಾಟಕ್ಕೆ ಮುಕ್ತಿ

ನಟರಾಜ ನಾಗಸಂದ್ರ
Published 10 ಜುಲೈ 2025, 1:55 IST
Last Updated 10 ಜುಲೈ 2025, 1:55 IST
ಭೂಮಿ ಉಸ್ತುವಾರಿ ಕೋಶ ಕಂದಾಯ ಆಯುಕ್ತಾಲಯದ ಮೊಬೈಲ್ ಮತ್ತು ವೆಬ್ ಆಧಾರಿತ ತಂತ್ರಾಂಶ
ಭೂಮಿ ಉಸ್ತುವಾರಿ ಕೋಶ ಕಂದಾಯ ಆಯುಕ್ತಾಲಯದ ಮೊಬೈಲ್ ಮತ್ತು ವೆಬ್ ಆಧಾರಿತ ತಂತ್ರಾಂಶ   

ದೊಡ್ಡಬಳ್ಳಾಪುರ: ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲ್ಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಭೂಮಿ ಉಸ್ತುವಾರಿ ಕೋಶ, ಕಂದಾಯ ಆಯುಕ್ತಾಲಯ ಮೊಬೈಲ್ ಮತ್ತು ವೆಬ್ ಆಧಾರಿತ ತಂತ್ರಾಂಶದ ಮೂಲಕ ಇ- ಪೌತಿ ಖಾತಾ ಆಂದೋಲನ ಆರಂಭಿಸಿದೆ.

ಇ-ಪೌತಿ ಖಾತಾ ಆಂದೋಲನಕ್ಕೆ ಸಂಬಂಧಪಟ್ಟಂತೆ ಗ್ರಾಮ ಆಡಳಿತಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಮುಗಿದ ಬಳಿಕ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲೂ ಏಕಕಾಲಕ್ಕೆ ಇ-ಪೌತಿ ಖಾತೆ ಆರಂಭವಾಗಲಿದೆ.

ಇ- ಪೌತಿ ಖಾತಾ ತಂತ್ರಾಂಶದಿಂದ ಅತ್ಯಂತ ಕಡಿಮೆ ದಾಖಲೆ ಮೂಲಕ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆ ವರ್ಗಾವಣೆಯಾಗಲಿದೆ. ಈಗಾಗಲೇ ಸರ್ಕಾರ ಕಂದಾಯ ಇಲಾಖೆಗೆ ಒಳಪಟ್ಟಿರುವ ಜಮೀನುಗಳ ಪಹಣಿಗಳಿಗೆ ಮಾಲೀಕರ ಆಧಾರ್‌ ಸಂಖ್ಯೆ ಜೋಡಣೆ ಮಾಡಲಾಗಿದೆ. ಇದರಿಂದ ಜಮೀನಿನ ದಾಖಲೆಗಳು ನಕಲಿಯಾಗುವುದು ತಪ್ಪಿದೆ.

ADVERTISEMENT

ಗ್ರಾಮ ಆಡಳಿತಾಧಿಕಾರಿಗಳು ಆಧಾರ್ ಜೋಡಣೆ ಮಾಡುವ ಸಂದರ್ಭದಲ್ಲಿ ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಪಹಣಿಗಳನ್ನು(ಆರ್‌.ಟಿ.ಸಿ) ಗುರುತಿಸಿದ್ದಾರೆ. ಈ ಅಂಕಿ–ಅಂಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 83,817 ಪೌತಿ ಖಾತೆಗಳು ವಾರಸುದಾರರಿಗೆ ವರ್ಗಾವಣೆಯಾಗಬೇಕಿದೆ.

ಮೃತ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರ ಆಧಾರ್ ಇಕೆವೈಸಿ ಮಾಡುವ ಮೂಲಕ ಅವರ ಒಪ್ಪಿಗೆಯನ್ನು ಪಡೆದು ಗ್ರಾಮ ಆಡಳಿತಾಧಿಕಾರಿಗಳು ವಾರಸುದಾರರ ಫೋಟೋವನ್ನು ತಂತ್ರಾಂಶದ ಮೂಲಕ ಸೆರೆ ಹಿಡಿದು ಪೌತಿ ಖಾತೆ ಮಾಡಲಾಗುತ್ತದೆ. ಮೃತ ವ್ಯಕ್ತಿಗೆ ಸಂಬಂಧಿಸಿದ ಇತರೆ ಜಮೀನುಗಳ ಸರ್ವೆ ನಂಬರ್‌ಗಳನ್ನು ದಾಖಲಿಸಿ ಮೃತ ವ್ಯಕ್ತಿಯ ಎಲ್ಲಾ ವಾರಸುದಾರರ ಒಪ್ಪಿಗೆಯನ್ನು ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಈ ಎಲ್ಲಾ ವಿವರಗಳು ದಾಖಲಾದ ಮಾಹಿತಿಯು ಭೂಮಿ ಕೇಂದ್ರಕ್ಕೆ ರವಾನಿಯಾಗಿ ಸ್ವಯಂ ಚಾಲಿತವಾಗಿ ಮ್ಯುಟೇಷನ್(ಎಂ.ಆರ್‌) ಪ್ರಕ್ರಿಯೆ ಮೂಲಕ ವಾರುಸುದಾರರ ಹೆಸರಿಗೆ ಪಹಣಿ ಬರಲಿದೆ.

ಪೌತಿ ಖಾತೆಗೆ ಮೃತ ಹೊಂದಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ ಅಥವಾ ಗ್ರಾಮದ ಮಹಜರ್ ವರದಿ, ಮೃತ ವ್ಯಕ್ತಿಯ ವಂಶವೃಕ್ಷ ಅಗತ್ಯ. ಇ- ಪೌತಿ ಖಾತಾ ಆಂದೋಲನದಿಂದ ಆಸ್ತಿಯ ಎಲ್ಲಾ ವಾರಸುದಾರರ ಒಪ್ಪಿಗೆಯು ದಾಖಲಾಗುವುದರಿಂದ ಕಾನೂನು ಬದ್ಧರಲ್ಲದ ವಾರಸುದಾರರಿಗೆ ಖಾತೆಯಾಗುವುದು ತಪ್ಪಲಿದೆ.ತಂತ್ರಾಂಶದ ಮೂಲಕ ಆಧಾರ್ ಇಕೆವೈಸಿ ಪಡೆಯುವುದರಿಂದ ಮ್ಯುಟೇಷನ್(ಎಂ.ಆರ್‌)ಪ್ರಕ್ರಿಯೆ ಮುಗಿದ ನಂತರ ಸ್ವಯಂ ಚಾಲಿತವಾಗಿ ಪಹಣಿಯೊಂದಿಗೆ ಆಧಾರ್ ಸಂಖ್ಯೆಯು ಜೋಡಣೆಯಾಗಲಿದೆ.

ಶೀಘ್ರ ಆರಂಭ
ಇ-ಪೌತಿ ಖಾತಾ ಆಂದೋಲನ ಕುರಿತಂತೆ ಗ್ರಾಮ ಆಡಳಿತಾಧಿಕಾರಿಗಳಿಗೆ ಜುಲೈ 14 ರಂದು ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲೂ ಏಕಕಾಲಕ್ಕೆ ಇ-ಪೌತಿ ಖಾತೆ ಆರಂಭವಾಗಲಿದೆ. ಪೌತಿ ಖಾತೆ ಮಾಡಿಸಿಕೊಳ್ಳುವುದರಿಂದ ರೈತರಿಗೆ ಸರ್ಕಾರದ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. -ಎ.ಬಿ.ಬಸವರಾಜು ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.