
ದೊಡ್ಡಬಳ್ಳಾಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಭಾಗಿತ್ವದಲ್ಲಿ ಉಪವಿಭಾಗ ಅಧಿಕಾರಿಗಳು ಹಾಗೂ ಉಪ ವಿಭಾಗದ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಹಿರಿಯ ನಾಗರೀಕರ ಪೋಷಣೆ, ಸಂರಕ್ಷಣಾ ಕಾಯ್ದೆ-2007ರ ಅಡಿಯಲ್ಲಿ ಶುಕ್ರವಾರ ಲೋಕ್ ಆದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
ಹಿರಿಯ ನಾಗರೀಕರ ಪೋಷಣೆ, ಸಂರಕ್ಷಣಾ ಕಾಯ್ದೆ-2007ರ ಅಡಿಯಲ್ಲಿ 43 ಪ್ರಕರಣಗಳು ದಾಖಲಾಗಿದ್ದು, ಮೂರು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
ಲೋಕ್ ಆದಾಲತ್ ಕುರಿತು ಮಾಹಿತಿ ನೀಡಿದ ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ಮಕ್ಕಳು ಹಿರಿಯನ್ನು ಸಾಕಿ ಸಲಹುವುದು ಕರ್ತ್ಯವಾಗಿದೆ. ಆದರೆ ಪೋಷಕರಿಂದ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ನಂತರ ಪೋಷಕರನ್ನು ಪೋಷಣೆ ಮಾಡುವ ಕರ್ತವ್ಯದಿಂದ ನುಣುಚಿಕೊಂಡರೆ ಹಿರಿಯ ನಾಗರೀಕರ ಪೋಷಣೆ, ಸಂರಕ್ಷಣಾ ಕಾಯ್ದೆ-2007 ಅಡಿಯಲ್ಲಿ ಪೋಷಕರು ತಮ್ಮ ಆಸ್ತಿಯನ್ನು ಮರಳಿ ತಮ್ಮ ಹೆಸರಿಗೆ ಪಡೆಯುವ ಅವಕಾಶ ಇದೆ ಎಂದು ಹೇಳಿದರು.
ಹಿರಿಯರ ಆರೋಗ್ಯ ಮತ್ತು ಇತರೆ ಸೌಲಭ್ಯಗಳನ್ನು ನೋಡಿಕೊಳ್ಳ ಈ ನಿಟ್ಟಿಯಲ್ಲಿ ಸಲ್ಲಿಕೆಯಾಗಿದ್ದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಸಲುವಾಗಿ ಹಾಗೂ ಪ್ರಕರಣದಲ್ಲಿನ ಉಭಯ ಕಕ್ಷಿದಾರರಿಗೂ ಸೌಹಾರ್ದಯುತವಾಗಿ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಲು ಕಾನೂನು ಸೇವಾ ಸಮಿತಿಯಿಂದ ನೇಮಿಸಲಾದ ವಕೀಲರ ಸಮ್ಮುಖದಲ್ಲಿ ಆದಾಲತ್‌ನಲ್ಲಿ ಅವಕಾಶ ನೀಡಲಾಗಿತ್ತು. ಇವುಗಳ ಪೈಕಿ ಮೂರು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.
ಲೋಕ್ ಆದಾಲತ್ ನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿಯ ಪ್ಯಾನಲ್ ವಕೀಲರಾದ ಟಿ.ಉಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.