ದೊಡ್ಡಬಳ್ಳಾಪುರ: ಅನಿಮಿಯಿತ ವಿದ್ಯುತ್ ಕಡಿತದಿಂದ ಗ್ರಾಮೀಣ ಭಾಗದಲ್ಲಿ ರೈತರು ಸಂಕಷ್ಟ ಸಿಲುಕಿದ್ದಾರೆ. ಬೆಳೆ ಒಣಗುತ್ತಿದೆ. ಈ ಬಗ್ಗೆ ಸಾಕಷ್ಟು ಮನವಿ ಮಾಡಿದ್ದರೂ ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದ ಡಿ.ಕ್ರಾಸ್ ಬಳಿಯಿರುವ ಕೆಪಿಟಿಸಿಎಲ್ ಉಪಪ್ರಸರಣ ಕೇಂದ್ರದ ಮುಂದೆ ಬೆಂಗಳೂರು–ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
‘ಒಂದೂವರೆ ತಿಂಗಳಿನಿಂದ ಗ್ರಾಮಾಂತರ ಪ್ರದೇಶದ ಕೃಷಿ ಪಂಪ್ ಸೆಟ್‌ಗೆ ನೀಡುವ ವಿದ್ಯುತ್ ಕಡಿತ ಗೊಳಿಸಿದ್ದಾರೆ. ಸಾಲ ಮಾಡಿ ಬೆಳೆದಿರುವ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ರಾಜ್ಯದ ಯಾವ ತಾಲ್ಲೂಕಿನಲ್ಲೂ ಇಲ್ಲದ ವಿದ್ಯುತ್ ಕಡಿತ ನಮ್ಮ ತಾಲ್ಲೂಕಿನಲ್ಲಿ ಮಾತ್ರ ಮಾಡುತ್ತಿರುವುದು ಖಂಡನೀಯ’ ಪ್ರತಿಭಟನನಿರತರು ಅಸಮಾಧಾನ ವ್ಯಕ್ತಪಡಿಸಿದರು.
ಹತ್ತು ದಿನಗಳ ಹಿಂದಷ್ಟೇ ಈ ಬಗ್ಗೆ ಪ್ರತಿಭಟನೆ ನಡೆಸಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ನೀಡುವ ಬಗ್ಗೆ ಈಗಲೂ ತಾರತಮ್ಯವಿದೆ. 7 ಗಂಟೆ ನಿರಂತರ ವಿದ್ಯುತ್ ನೀಡಬೇಕೆಂಬ ನಿಯಮವಿದ್ದರೂ 1 ರಿಂದ 2 ಗಂಟೆ ವಿದ್ಯುತ್ ಸರಬರಾಜು ಇದ್ದರೆ ಹೆಚ್ಚು ಎನ್ನುವಂತಾಗಿದೆ. ಕುಡಿಯುವ ನೀರಿಗೂ ಸಹ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಕಾರ್ಯದರ್ಶಿ ಆರ್.ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನನಿರತರೊಂದಿಗೆ ಮಾತನಾಡಿದ ಬೆಸ್ಕಾಂ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಪ್ರಮುಖ ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿವೆ. ಒಂದೇ ಪರಿವರ್ತಕದಲ್ಲಿ ವಿದ್ಯುತ್ ಪ್ರಸರಣ ಸರಿದೂಗಿಸಲು ಲೋಡ್ ಶೆಡ್ಡಿಂಗ್ ಮಾಡಬೇಕಾದ ಅನಿವಾರ್ಯತೆ ಇದೆ. ಇದು ಇಲ್ಲಿನ ತಾಂತ್ರಿಕ ಸಮಸ್ಯೆಯೇ ಹೊರತು ಲೋಡ್ ಶೆಡ್ಡಿಂಗ್ ಅಲ್ಲ. ವಿದ್ಯುತ್ ಪರಿವರ್ತಕಗಳ ದುರಸ್ತಿ ಅಂತಿಮ ಹಂತದಲ್ಲಿದೆ. ಇಂದು ರಾತ್ರಿಯೇ ವಿದ್ಯುತ್ ಸರಬರಾಜು ಸರಿಯಾಗಲಿದೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಹನುಮಂತೇಗೌಡ, ಕುಮಾರ್, ರವಿ, ತನುಜ್ ಹಾಗೂ ರೈತರು ಭಾಗವಹಿಸಿದ್ದರು.
ರಸ್ತೆ ತಡೆಯಿಂದ ಕೆಲ ಕಾಲ ವಾಹನ ದಟ್ಟಣೆ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.