
ದೊಡ್ಡಬಳ್ಳಾಪುರ: ಒಂದು ಕ್ಷಣದ ನಿರ್ಲಕ್ಷ್ಯ ಇಡೀ ಬದುಕನ್ನೇ ದುಸ್ತರ ಮಾಡುತ್ತದೆ. ಅವಲಂಬಿತರನ್ನು ಅನಾಥವಾಗಿಸುವ ಅವಘಡಗಳ ತಡೆಗೆ ನಿಯಮಪಾಲನೆ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕ್ರಾಂತಿ ಕಿರಣ್ ಅಭಿಪ್ರಾಯಪಟ್ಟರು.
ಇಲ್ಲಿನ ಜಿಲ್ಲಾ ಪೊಲೀಸ್ ಇಲಾಖೆ, ಆಲ್ಟ್ರಾಟೆಕ್ ಸಿಮೆಂಟ್, ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ ಸ್ಟಿಟ್ಯೂಷನ್ಸ್, ಜಾಲಪ್ಪ ಪಾಲಿಟೆಕ್ನಿಕ್, ಶ್ರೀರಾಮ ನರ್ಸಿಂಗ್ ಕಾಲೇಜು, ಸುಜ್ಞಾನ ದೀಪಿಕಾ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಬುಧವಾರ ಆಯೋಜಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮದ ಬಳಿಕ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡುವುದು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಕಾರು ಇತರ ವಾಹನಗಳ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸುವುದು ಮತ್ತು ಅತಿ ವೇಗವಾಗಿ ವಾಹನ ಚಲಾಯಿಸುವುದನ್ನು ತಡೆಯುವುದು ಅಗತ್ಯ ಎಂದರು.
ಶ್ರೀರಾಮ ಆಸ್ಪತ್ರೆ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ, ಭಾರತದಲ್ಲಿ ಪ್ರತಿವರ್ಷ ಜನವರಿ ತಿಂಗಳಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ರಸ್ತೆ ಅಪಘಾತ ತಡೆಗಟ್ಟಲು ಮತ್ತು ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಅಲ್ಟ್ರಾಟೆಕ್ ಸಿಮೆಂಟ್‌ನ ಲಾಜಿಸ್ಟಿಕ್ ಜಿ.ಎಂ.ಪಂಕಜ್ ಶರ್ಮ, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಬಾರದು. ನಿಗದಿತ ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸುವುದು ಅಕ್ಷಮ್ಯ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಜೀವಕ್ಕೆ ಅಪಾಯಕಾರಿ. ಈ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುವುದು ಎಂದರು.
ಸುಜ್ಞಾನ ದೀಪಿಕಾ ಸಂಸ್ಥೆ ಮಂಜುನಾಥ್, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಅತಿಥಿಗಳಿಗೆ ರಸ್ತೆ ಸುರಕ್ಷತಾ ನಿಯಮ ಪಾಲನೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ವಲಯ ಅಧ್ಯಕ್ಷ ಜೆ.ಆರ್.ರಾಕೇಶ್, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್ ಕುಮಾರ್, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಎಂ.ರೇಣುಕಾಮೂರ್ತಿ, ಜಾಲಪ್ಪ ಪಾಲಿಟೆಕ್ನಿಕ್ ಪ್ರಾಂಶುಪಾಲ ನರಸಿಂಹರೆಡ್ಡಿ ಸೇರಿದಂತೆ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಶ್ರೀರಾಮ ನರ್ಸಿಂಗ್ ಕಾಲೇಜು ಮತ್ತು ಜಾಲಪ್ಪ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.