ದೊಡ್ಡಬಳ್ಳಾಪುರ: ಪರೀಕ್ಷೆಗಳೆಂದರೆ ಆತಂಕ ಪಡುವ ವಿದ್ಯಾರ್ಥಿಗಳು ಮೊದಲ ದಿನದಿಂದಲೇ ಪೂರ್ವ ತಯಾರಿ ನಡೆಸಿದರೆ ಅತ್ಯುತ್ತಮ ಫಲಿತಾಂಶ ಗಳಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಕಾರ್ಯದರ್ಶಿ ಡಾ.ಇಂದಿರಾ ಹೇಳಿದರು.
ನಗರದ ಗುರುಕುಲ ಇಂಟರ್ ನ್ಯಾಷನಲ್ ರೆಷಿಡೆನ್ಸಿಯಲ್ ಶಾಲೆಯಲ್ಲಿ ಎಸ್.ಎಸ್.ಎಸ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಪೂರ್ವಸಿದ್ಧತಾ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್‌ಗಳ ಬಲೆಗೆ ಬಿದ್ದು ಓದುವ ವಿಷಯಗಳತ್ತ ಗಮನ ಕಡಿಮೆಯಾಗುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿಗೆ ಹಾನಿಯಾಗುತ್ತಿದ್ದು, ಹಾರ್ಮೋನ್‌ಗಳಲ್ಲಿ ವ್ಯತ್ಯಯ ಉಂಟಾಗುತ್ತಿವೆ. ಮೆದುಳಿಗೆ ಸಾಕಷ್ಟು ಬೇಡದ ವಿಷಯ ತುಂಬಿ, ಅದರ ಸಾಮರ್ಥ್ಯ ಕುಗ್ಗುತ್ತಿದೆ. ವಿದ್ಯಾರ್ಥಿಗಳಲ್ಲಿ ಅವರದ್ದೇ ಆದ ಪ್ರತ್ಯೇಕ ಸಾಮರ್ಥ್ಯ ಇರುತ್ತದೆ. ಅದರ ಸದುಪಯೋಗಪಡಿಸಿಕೊಳ್ಳುವುದು ಅವಶ್ಯಕ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ನಾಗರಾಜುಅಶ್ವತ್ಥ್, ವಿದ್ಯಾರ್ಥಿಗಳು ಕನಸು ಈಡೇರಿಸಿಕೊಳ್ಳಲು ನಿರಂತರ ಪರಿಶ್ರಮ ಅವಶ್ಯಕ. ತಂತ್ರಜ್ಞಾನ ಬೆಳೆದಂತೆಲ್ಲ ಬರವಣಿಗೆ ಅಭ್ಯಾಸ ಕಡಿಮೆಯಾಗಿದೆ. ಪದವಿ ಮುಗಿದರೂ ವಿದ್ಯಾರ್ಥಿಗಳು ಬರೆಯಲು ಪದಗಳೇ ಬರದಂತೆ ಹಿಂಜರಿಯುತ್ತಿದ್ದಾರೆ. ಹೀಗಾಗಿ ಓದುವುದರ ಜತೆಗೆ ಬರವಣಿಗೆಯ ಕಡೆ ಆಸಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು.
ಪತ್ರಿಕೆಗಳನ್ನು ಓದಿ ಪ್ರಚಲಿತ ಘಟನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಶಾಲಾ ಹಂತದಿಂದಲೇ ಸಿದ್ಧತೆ ಕೈಗೊಂಡರೆ ಉನ್ನತ ಸ್ಥಾನ ತಲುಪುವುದು ಸುಲಭವಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್, ಸಹ ಶಿಕ್ಷಕ ಶರಣಪ್ಪ ಇದ್ದರು.
18ಕ್ಕೆ ನಾ.ಸೋಮೇಶ್ವರ ಉಪನ್ಯಾಸ:
‘ಥಟ್ ಅಂತಾ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದ ಖ್ಯಾತ ನಿರೂಪಕ ಡಾ.ನಾ.ಸೋಮೇಶ್ವರ ನೇತೃತ್ವದಲ್ಲಿ ಆಗಸ್ಟ್ 18 ರಂದು ಬೆಳಗ್ಗೆ 11ಕ್ಕೆ ನಗರದ ಗುರುಕುಲ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಮತ್ತವರ ಪೋಷಕರೊಂದಿಗೆ ‘ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಮತ್ತು ಪರೀಕ್ಷೆಗಳ ಒತ್ತಡ ನಿರ್ವಹಣೆ’ ವಿಷಯಗಳ ಕುರಿತು ಸಂವಾದ ಆಯೋಜನೆ ಮಾಡಲಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಲೋಕೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.