ADVERTISEMENT

ಹೋರಿಗಳಿಗೆ ಸಿದ್ಧವಾಗುತ್ತಿವೆ ಹೈಟೆಕ್‌ ಪೆಂಡಾಲ್‌ಗಳು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 17:02 IST
Last Updated 14 ಡಿಸೆಂಬರ್ 2024, 17:02 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಡಿ.20 ರಿಂದ ಪ್ರಾರಂಭವಾಗುವ ದನಗಳ ಜಾತ್ರೆಯಲ್ಲಿ ಹೋರಿಗಳನ್ನು ಕಟ್ಟಲು ಹೈಟೆಕ್‌ ಪೆಂಡಾಲ್‌ಗಳನ್ನು ನಿರ್ಮಿಸುವಲ್ಲಿ ನಿರತರಾಗಿರುವ ರೈತರು
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಡಿ.20 ರಿಂದ ಪ್ರಾರಂಭವಾಗುವ ದನಗಳ ಜಾತ್ರೆಯಲ್ಲಿ ಹೋರಿಗಳನ್ನು ಕಟ್ಟಲು ಹೈಟೆಕ್‌ ಪೆಂಡಾಲ್‌ಗಳನ್ನು ನಿರ್ಮಿಸುವಲ್ಲಿ ನಿರತರಾಗಿರುವ ರೈತರು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀಘಾಟಿ ಸುಬ್ರಹ್ಮಣ್ಯ ರಥೋತ್ಸವದ ಅಂಗವಾಗಿ ಡಿ.20ರಿಂದ ಆರಂಭವಾಗುವ ದನಗಳ ಜಾತ್ರೆಯಲ್ಲಿ ರೈತರು ಆಯಕಟ್ಟಿನ ಸ್ಥಳಗಳಲ್ಲಿ ತಾವು ಸಾಕಿರುವ ಹೋರಿಗಳನ್ನು ಕಟ್ಟಲು ಹೈಟೆಕ್‌ ಮಾದರಿಯಲ್ಲಿ ಪೆಂಡಾಲ್‌ಗಳ ನಿರ್ಮಾಣ ಪ್ರಾರಂಭಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುವ ಬೆಳೆಗಳ ಕೊಯ್ಲು ಮುಕ್ತಾಯವಾಗುತ್ತಿದ್ದಂತೆ ರಾಜ್ಯದಲ್ಲೇ ಪ್ರಥಮ ಬಾರಿಗೆ ನಡೆಯುವ ಘಾಟಿಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ಕೃಷಿ ಕೆಲಸಕ್ಕೆ ಬೇಕಾಗುವ ಹೋರಿಗಳನ್ನು ಖರೀದಿಸಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಬಳ್ಳಾರಿ, ದಾವಣಗೆರೆ, ರಾಯಚೂರು, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಾದ ತಮಿಳುನಾಡಿನ ಸೇಲಂ, ಹೊಸೂರು, ಆಂಧ್ರಪ್ರದೇಶದ ಹಿಂದೂಪುರ, ಅನಂತಪುರ, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಸೇರಿದಂತೆ ವಿವಿಧ ಕಡೆಗಳಿಂದಲು ರೈತರು ಬರುತ್ತಾರೆ.

ADVERTISEMENT

ವಿವಿಧೆಡೆಗಳಿಂದ ದನಗಳ ಜಾತ್ರೆಗೆ ಬರುವ ರೈತರಿಗೆ ದೇವಾಲಯ ಆಡಳಿತ ಮಂಡಳಿಯಿಂದ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಾತ್ರೆಯಲ್ಲಿ ಅಮೃತ್ ಮಹಲ್, ಹಳ್ಳಿಕಾರ್ ಸೇರಿದಂತೆ ಸ್ಥಳೀಯ ನಾಟಿ ಹೋರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಬರಲಿವೆ. ಜ.5ರಂದು ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ನಡೆಯಲಿದೆ.

ಸುಂಕ ವಸೂಲಿ ವಿನಾಯಿತಿ ನೀಡಿ
‘ಜಾತ್ರೆಗೆ ಮಾರಾಟಕ್ಕೆ ಬರುವ ಒಂದು ಜೋಡಿ ಹೋರಿಗಳಿಗೆ ₹50ಗಳವರೆಗೂ ಟೋಲ್‌ ಸುಂಕ ವಸೂಲಿ ಮಾಡಲಾಗುತ್ತದೆ. ಹೋರಿಗಳನ್ನು ಸಾಕಾಣಿಕೆ ಮಾಡುವ ರೈತರ ಸಂಖ್ಯೆಯೇ ಕಡಿಮೆಯಾಗುತ್ತಿದ್ದು ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಬರುವ ಹೋರಿಗಳ ಸಂಖ್ಯೆಯು ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಜಾತ್ರೆಗೆ ಮಾರಾಟಕ್ಕೆ ಬರುವ ಹೋರಿಗಳಿಗೆ ಟೋಲ್‌ ಸುಂಕು ವಸೂಲಿಯಿಂದ ವಿನಾಯಿತಿ ನೀಡಬೇಕು’ ಎಂದು ತೂಬಗೆರೆ ಗ್ರಾಮದ ಯುವ ಮುಖಂಡ ಉದಯ ಆರಾಧ್ಯ ಜಿಲ್ಲಾ ಆಡಳಿತವನ್ನು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.