ADVERTISEMENT

ದೊಡ್ಡಬಳ್ಳಾಪುರ: ಗ್ರಾಮೀಣ ಸಾಮರಸ್ಯಕ್ಕೆ ಧಕ್ಕೆ ತಂದ ಕ್ರೀಡೋತ್ಸವ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 5:20 IST
Last Updated 18 ಫೆಬ್ರುವರಿ 2023, 5:20 IST
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲದಲ್ಲಿ ಚಾಕು ಇರಿತ ಘಟನೆ ನಡೆದ ಸ್ಥಳದ ಪರಿಶೀಲನೆ ನಡೆಸುತ್ತಿರುವ ಪೊಲೀಸರು
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲದಲ್ಲಿ ಚಾಕು ಇರಿತ ಘಟನೆ ನಡೆದ ಸ್ಥಳದ ಪರಿಶೀಲನೆ ನಡೆಸುತ್ತಿರುವ ಪೊಲೀಸರು   

ದೊಡ್ಡಬಳ್ಳಾಪುರ: ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಯುವಜನರ ನಡುವೆ ನಡೆದ ಗಲಾಟೆಯು ಇಬ್ಬರು ಯುವಕರ ಕೊಲೆಯಲ್ಲಿ ಅಂತ್ಯವಾಗುವ ಮೂಲಕ ಗ್ರಾಮೀಣ ಜನರ ನಡುವಿನ ಸಾರಮರಸ್ಯವನ್ನೇ ಹಾಳು ಮಾಡಿದೆ.

ದೊಡ್ಡಬೆಳವಂಗಲದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಹೆಸರಿನಲ್ಲಿ ಪ್ರಥಮ ಬಾರಿಗೆ ಶಿವರಾತ್ರಿ ಹಬ್ಬದ ಅಂಗವಾಗಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ದೀರಜ್‌ ಮುನಿರಾಜ್‌ ಅವರು ಕ್ರೀಡೋತ್ಸವ-2023 ಆಯೋಜಿಸಿದ್ದರು. ಇದಕ್ಕೆ ಕ್ರೀಡಾಂಗಣದಲ್ಲಿ ಆಳವಡಿಸಲಾಗಿದ್ದ ಬೃಹತ್‌ ಬ್ಯಾನರ್‌ಗಳು ಸಾಕ್ಷಿಯಾಗಿವೆ.

ಯುವ ಸಮುದಾಯ ಸಂತೋಷವಾಗಿ ಆಟವಾಡಿ ಖುಷಿಪಡಬೇಕಿದ್ದ ವೇದಿಕೆಯಲ್ಲಿ ಶುಕ್ರವಾರ ಮಧ್ಯಾಹ್ನ ಭರತ್‌ಕುಮಾರ್‌ ಹಾಗೂ ಪ್ರತೀಶ್‌ ಅವರು ನಡುರಸ್ತೆಯಲ್ಲೇ ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟಿರುವುದು ಸಾರ್ವನಿಕರನ್ನು ಭಯಭೀತರನ್ನಾಗಿಸಿದೆ.

ADVERTISEMENT

ದೊಡ್ಡಬೆಳವಂಗಲದಲ್ಲಿ ಸದ್ಯಕ್ಕೆ ಬಿಗುವಿನ ವಾತಾವರಣ ಏರ್ಪಟ್ಟಿದ್ದು ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಸ್ಥಳೀಯರ ಮಾಹಿತಿ ಪ್ರಕಾರ ಹುಲಿಕುಂಟೆ ಗ್ರಾಮದ ಯುವಕ ಚಾಕು ಇರಿತದ ಕೃತ್ಯ ಎಸಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಆದರೆ, ಇದನ್ನು ಪೊಲೀಸರು ಖಚಿತಪಡಿಸಿಲ್ಲ.

ಮೃತರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆಯಲಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟವರಲ್ಲಿ ಭರತ್‌ಕುಮಾರ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೆ, ಪ್ರತೀಶ್‌ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ.

ಇದೇ ಪ್ರಥಮ ಬಾರಿಗೆ ತಾಲ್ಲೂಕಿನಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಯುವ ಸಮುದಾಯವನ್ನು ತಮ್ಮತ್ತ ಸೆಳೆದುಕೊಳ್ಳಲು ಕ್ರಿಕೆಟ್‌ ಸೇರಿದಂತೆ ವಿವಿಧ ಕ್ರೀಡೋತ್ಸವ ನಡೆಸುವುದು ಸಾಮಾನ್ಯವಾಗಿದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಇದೆ. ಕ್ರೀಡೋತ್ಸವದ ನೆಪದಲ್ಲಿ ಯುವಕರು ಕುಡಿತಕ್ಕೆ ದಾಸರಾಗುತ್ತ, ತೋಟಗಳಲ್ಲಿ ಕೆಲಸ ಮಾಡದಂತಾಗಿದ್ದಾರೆ ಎನ್ನುವ ಅಳಲು ಪೋಷಕರದ್ದು.

ಮತದಾನದ ದಿನ ಯಾರು ಯಾವ ಪಕ್ಷಕ್ಕಾದರೂ ಮತ ಹಾಕಿಕೊಳ್ಳಲಿ. ಆದರೆ ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಯುವ ಸಮುದಾಯವನ್ನು ಸೆಳೆಯಲು ರಾಜಕೀಯ ಪಕ್ಷಗಳು ನಡೆಸುತ್ತಿರುವ ವಿವಿಧ ಬಗೆಯ ಕಸರತ್ತುಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ಚುನಾವಣ ಆಯೋಗ ಹಾಗೂ ಪೊಲೀಸರು ವಿವಿಧ ರೀತಿಯ ಕಸರತ್ತಿನ ಮೂಲಕ ರಾಜಕೀಯ ಪಕ್ಷಗಳು ಮತದಾರರಿಗೆ ಒಡ್ಡುತ್ತಿರುವ ಆಮಿಷಗಳ ಬಗ್ಗೆ ತೀವ್ರ ನಿಗಾವಹಿಸಬೇಕಿದೆ ಎಂದು ಸಾರ್ವಜನಿಕರ
ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.