ADVERTISEMENT

ದೊಡ್ಡಬಳ್ಳಾಪುರ | ನೂತನ ಜವಳಿ ನೀತಿ: ನೇಕಾರ ಸಮಸ್ಯೆ ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:41 IST
Last Updated 24 ಜನವರಿ 2026, 6:41 IST
ದೊಡ್ಡಬಳ್ಳಾಪುರ ನೇಕಾರರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಜವಳಿ ಸಚಿವ ಶಿವಾನಂದ ಪಾಟೀಲ್ ಅವರಿಗೆ ನೇಕಾರ ಮುಖಂಡರು ಮನವಿ ಸಲ್ಲಿಸಿದರು
ದೊಡ್ಡಬಳ್ಳಾಪುರ ನೇಕಾರರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಜವಳಿ ಸಚಿವ ಶಿವಾನಂದ ಪಾಟೀಲ್ ಅವರಿಗೆ ನೇಕಾರ ಮುಖಂಡರು ಮನವಿ ಸಲ್ಲಿಸಿದರು   

ದೊಡ್ಡಬಳ್ಳಾಪುರ: ಸೂರತ್‌ ಮಗ್ಗಗಳಿಂದ ಸಂಘಟಿತ ಉದ್ಯಮಗಳಲ್ಲಿ ತಯಾರಾಗುತ್ತಿರುವ ಸೀರೆಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲು ನಿರ್ಬಂಧಿಸಬೇಕು ಹಾಗೂ ನೇಕಾರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನೇಕಾರರ ಹೋರಾಟ ಸಮಿತಿಯಿಂದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಜವಳಿ ಸಚಿವ ಶಿವಾನಂದ ಪಾಟೀಲ್‌ ಅವರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ 2026-31ನೇ ಸಾಲಿನ ನೂತನ ಜವಳಿ ನೀತಿ ರೂಪಿಸುವ ಕುರಿತ ಸಭೆಯಲ್ಲಿ ನೇಕಾರರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.

ಇತ್ತೀಚೆಗೆ ಸೂರತ್‌ನಿಂದ ಬರುತ್ತಿರುವ ಲಾಳಿ ರಹಿತ ಮಗ್ಗಗಳ ಸೀರೆಯಿಂದ ಸ್ಥಳೀಯ ನೇಕಾರರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಲಾಳಿ ಸಹಿತ ಮಗ್ಗಗಳಲ್ಲಿ ಉತ್ಪಾದನೆ ಆಗುವ ಸಾಂಪ್ರದಾಯಿಕ ಸೀರೆಗಳನ್ನು ಲಾಳಿ ರಹಿತ ಮಗ್ಗಗಳಲ್ಲಿ ಉತ್ಪಾದಿಸದಂತೆ ವಿದ್ಯುತ್‌ ಮಗ್ಗ (ಲಾಳಿಸಹಿತ) ಅಧಿನಿಯಮ ಕಾಯ್ದೆಯನ್ನು ಕೇಂದ್ರ ಸರ್ಕಾರದಿಂದ ಜಾರಿಗೊಳಿಸಲು ಒತ್ತಡ ಹೇರುವಂತೆ ಮನವಿ ಮಾಡಲಾಗಿದೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ತಿಳಿಸಿದರು.

ADVERTISEMENT

ನೂತನ ಜವಳಿ ನೀತಿಯಲ್ಲಿ ನೇಕಾರರ ಲಾಳಿಸಹಿತ ಮಗ್ಗಗಳಿಂದ ನೇಯ್ದ ಸೀರೆಗಳನ್ನು ಸರ್ಕಾರ ಖರೀದಿಸುವ ಯೋಜನೆ ಜಾರಿಗೆ ತರಬೇಕಿದೆ. ವಿದೇಶಿ ನೇಕಾರರಿಗೆ ಮಾರುಕಟ್ಟೆ ವೇದಿಕೆ ನಿರ್ಮಾಣ ಮಾಡಬೇಕಿದೆ. ನೇಕಾರರ ಕಾಲೊನಿ ನಿರ್ಮಿಸಿಬೇಕು. ನೇಕಾರರ ಆರೋಗ್ಯ ವಿಮಾ ಯೋಜನೆ ಅನುಷ್ಠಾನ, ವಿದ್ಯುತ್‌ ಮಗ್ಗ ಯೋಜನೆ ಹಾಗೂ ಎಲೆಕ್ಟ್ರಾನಿಕ್‌ ಜಕಾರ್ಡ್‌ ಖರೀದಿ ಯೋಜನೆಗಳಡಿ ಘಟಕ ವೆಚ್ಚ ಹಾಗೂ ಸಹಾಯಧನವನ್ನು ಹೆಚ್ಚಿಸಬೇಕೆಂದು ಆಗ್ರಹಿಸಲಾಗಿದೆ.

ನೇಕಾರರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳ ಸಮನ್ವಯ ಸಭೆ ಕರೆಯಲು ಸಹ ಮನವಿ ಮಾಡಲಾಗಿದೆ ಎಂದರು.

ನೂತನ ಜವಳಿ ನೀತಿ ಅನುಷ್ಠಾನದ ವೇಳೆ ನೇಕಾರರ ಸಮಸ್ಯೆಗಳನ್ನು ಪರಿಗಣಿಸಿ ಜವಳಿ ನೀತಿಯಲ್ಲಿ ಅಳವಡಿಸಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಧ್ರುವಕುಮಾರ್‌, ಚಂದ್ರಮೋಹನ್‌, ಭೀಮಣ್ಣ, ಸಿದ್ದೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.