ದೊಡ್ಡಬಳ್ಳಾಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿಬ್ಬಾಣ ಅಂಗವಾಗಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ರೋಜಿಪುರದ ಸ್ಮಶಾನದಲ್ಲಿ ಬಿರಿಯಾನಿ ಊಟ ಮಾಡಿ ಮೌಢ್ಯ ವಿರೋಧಿ ದಿನ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಧ್ಯಾಪಕ ಪ್ರಕಾಶ್‌ಮಂಟೆದ, ಆಧುನಿಕ ನಾಗರಿಕ ಸಮಾಜ ಹೆಚ್ಚು ಮೌಢ್ಯವನ್ನು ಅನುಸರಿಸುತ್ತಿರುವುದು ನೋವಿನ ಸಂಗತಿ. ಮೌಢ್ಯತೆಯು ಸಹ ಇಂದು ಫ್ಯಾಷಿನೇಶ್ ಆಗುತ್ತಿದೆ. ಸಾಮಾಜಿಕ ತಂತ್ರಜ್ಞಾನ ಸಹ ಮೌಢ್ಯತೆಯನ್ನು ಬಿತ್ತುವ ಮಾಧ್ಯಮಗಳಾಗಿವೆ. ಇದರಿಂದ ಮತ್ತೆ ಸಮಾಜ ಮೌಢ್ಯತೆಯ ಕಡೆ ಹೊರಳುತ್ತಿದೆ. ಮೌಢ್ಯ ಹೋಗಲಾಡಿಸಿ ವೈಚಾರಿಕ ಪ್ರಜ್ಞೆ ಜನರಲ್ಲಿ ಬಿತ್ತಲು ಮೌಢ್ಯ ವಿರೋಧಿ ದಿನಾಚರಣೆಯಂತಹ ಕಾರ್ಯಕ್ರಮಗಳು ಪ್ರಸ್ತುತವಾಗಿವೆ. ಜನರಲ್ಲಿ ಅರಿವು ಮತ್ತು ಪ್ರಜ್ಞೆಯನ್ನು ಬಿತ್ತಲು ಸಹಕಾರಿಯಾಗುತ್ತಿವೆ ಎಂದರು.
ಸಮಾಜದ ಆರೋಗ್ಯವನ್ನು ಕಾಪಾಡಬೇಕು. ಅಜ್ಞಾನವನ್ನು ತೊಲಗಿಸಬೇಕೆಂಬ ಕಾರಣಕ್ಕೆ ಸಮಾನ ಮನಸ್ಕರು ಸೇರಿ ಪ್ರತಿ ವರ್ಷ ಈ ಮೌಢ್ಯ ವಿರೋಧಿ ದಿನಾಚರಣೆ ನಡೆಸಲಾಗುತ್ತಿದೆ. ಮೌಢ್ಯತೆಯಿಂದ ದೂರವಾಗಿ ಶೂನ್ಯತ್ವದ ಕಡೆ ಹೋಗುವುದನ್ನೇ ಬೌದ್ಧ ದಮ್ಮದಲ್ಲಿ ಪರಿನಿಬ್ಬಾಣ ಎಂದು ಕರೆಯಲಾಗುತ್ತದೆ ಎಂದರು.
ಉದ್ಯಮಿ ರಾಜ್‌ಗೋಪಾಲ್, ‘ಹಲವು ರೀತಿಯ ಮೌಢ್ಯತೆಗಳಿಗೆ ನಮಗೆ ಅರಿವಿಲ್ಲದೆಯೇ ನಾವು ಬಲಿಯಾಗಿದ್ದೇವೆ. ಆಧುನಿಕ ಕಾಲದಲ್ಲಿ ವಿಜ್ಞಾನ ತಂತ್ರಜ್ಞಾನವು ಎಷ್ಟೇ ಮುಂದುವರೆದಿದ್ದರೂ ಸಹ ಇಂದಿಗೂ ಮೌಡ್ಯತೆ ನಂಬುವ, ಪಾಲಿಸುವ ಯುವ ಸಮುದಾಯ ನಮೊಟ್ಟಿಗಿರುವುದು ವಿಪರ್ಯಾಸ. ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಯುವ ಸಮುದಾಯವನ್ನು ಎಚ್ಚರಿಸುವ ಕೆಲಸ ಆಗಬೇಕಿದೆ’ ಎಂದರು.
ಇನ್‌ಸ್ಪೆಕ್ಟರ್ ಅಮರೇಶ್‌ಗೌಡ, ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಾಧೀಕ್‌ಪಾಷ, ಮುಖಂಡರಾದ ಮುನಿಯಪ್ಪ,ಸಂಜೀವನಾಯಕ,ಸೊಣ್ಣಪನಹಳ್ಳಿ ರಮೇಶ್, ಪಿ.ಎ.ವೆಂಕಟೇಶ್, ಅಶೋಕ, ಮುನಿರಾಜು, ಮಲ್ಲರಾಜು, ರಾಜಣ್ಣಏಕಾಶಿಪುರ, ತಳಗವಾರ ಪುನೀತ್, ತಳಗವಾರ ಸುರೇಶ್, ವಡ್ಡರಹಳ್ಳಿ ರಾಜಶೇಖರ್, ರತ್ನಮ್ಮ, ಗುರುಪ್ರಸಾದ್, ಗೂಳ್ಯ ಹನುಮಣ್ಣ, ರಾಜುಸಣ್ಣಕ್ಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.